ರಾಹುಲ್ ಗಾಂಧಿ
– ಪಿಟಿಐ ಚಿತ್ರ
ವಾಷಿಂಗ್ಟನ್: ಭಾರತ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ನಿರುದ್ಯೋಗದಿಂದ ತತ್ತರಿಸುತ್ತಿದ್ದರೆ ಜಾಗತಿಕ ಉತ್ಪಾದನಾ ವಲಯದಲ್ಲಿ ಆಧಿಪತ್ಯ ಸಾಧಿಸಿರುವ ಚೀನಾದಲ್ಲಿ ಆ ಸಮಸ್ಯೆ ಇಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ದಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡ ಅವರು, ಭಾರತದಲ್ಲಿ ಕೌಶಲ್ಯಕ್ಕೆ ಕೊರತೆ ಇಲ್ಲ. ಭಾರತವು ಉತ್ಪಾದನಾ ವಲಯಕ್ಕೆ ಹೆಚ್ಚು ಒತ್ತು ನೀಡಿದರೆ ಚೀನಾಕ್ಕೆ ಸ್ಪರ್ಧೆ ಒಡ್ಡಬಹುದು ಎಂದಿದ್ದಾರೆ.
ಉದ್ಯಮ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ ನಡುವಿನ ಅಂತರ ತಗ್ಗಿಸಲು ವೃತ್ತಿಪರ ತರಬೇತಿಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
4 ದಿನಗಳ ಅನಧಿಕೃತ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ದಲ್ಲಾಸ್, ಟೆಕ್ಸಾಸ್ ಮತ್ತು ವಾಷಿಂಗ್ಟನ್‌ನಲ್ಲಿ ಭಾರತ ಮೂಲದವರು, ವಿದ್ಯಾರ್ಥಿಗಳು, ಯುವಕರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿನ ಕೆಲ ರಾಜಕಾರಣಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನೂ ಭೇಟಿ ಮಾಡಲಿದ್ದಾರೆ.
ಶನಿವಾರ ರಾತ್ರಿ ದಲ್ಲಾಸ್‌ಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಸಾಗರೋತ್ತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಇಂಡೋ–ಅಮೆರಿಕನ್ ಸಮುದಾಯದ ಹಲವರು ಬರಮಾಡಿಕೊಂಡರು.
ಪಾಶ್ಚಿಮಾತ್ಯ ದೇಶಗಳಲ್ಲಿ ಉದ್ಯೋಗದ ಸಮಸ್ಯೆ ಇದೆ. ಭಾರತದಲ್ಲಿ ಉದ್ಯೋಗದ ಸಮಸ್ಯೆ ಇದೆ. ವಿಶ್ವದ ಹಲವು ದೇಶಗಳಲ್ಲಿ ಉದ್ಯೋಗದ ಸಮಸ್ಯೆ ಇಲ್ಲ. ಚೀನಾದಲ್ಲಿ ಖಂಡಿತಾ ಇಲ್ಲ. ವಿಯಟ್ನಾಂನಲ್ಲೂ ಉದ್ಯೋಗದ ಸಮಸ್ಯೆ ಇಲ್ಲ ಎಂದು ರಾಹುಲ್ ಹೇಳಿದ್ದಾರೆ.
‘1940, 50 ಮತ್ತು 60ರ ದಶಕದ ಅಮೆರಿಕವನ್ನು ಗಮನಿಸಿದರೆ, ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಕಾರುಗಳು, ವಾಷಿಂಗ್ ಮೆಶಿನ್, ಟಿವಿ.. ಏನೇ ಆಗಿದ್ದರೂ ಅಮೆರಿಕದಲ್ಲಿ ಉತ್ಪಾದನೆಯಾಗಿ ಬರುತ್ತಿದ್ದವು. ಇದೀಗ, ಉತ್ಪಾದನಾ ವಲಯ ಅಮೆರಿಕದಿಂದ ಬೇರೆಡೆಗೆ ಸ್ಥಳಾಂತರಗೊಂಡಿದೆ. ಮೊದಲಿಗೆ ಕೊರಿಯಾ, ಜಪಾನ್. ಕ್ರಮೇಣ ಚೀನಾ ಉತ್ಪಾದನಾವಲಯದಲ್ಲಿ ಆಧಿಪತ್ಯ ಸಾಧಿಸಿದೆ’ಎಂದಿದ್ದಾರೆ.
ಪಾಶ್ಚಿಮಾತ್ಯ ದೇಶಗಳು, ಅಮೆರಿಕ, ಭಾರತ ಮತ್ತು ಯೂರೋಪ್ ಉತ್ಪಾದನಾ ಮಂತ್ರವನ್ನು ತ್ಯಜಿಸಿ ಚೀನಾಗೆ ಒಪ್ಪಿಸಿದವು ಎಂದು ಹೇಳಿದ್ದಾರೆ.
‘ಉತ್ಪಾದನಾ ಚಟುವಟಿಕೆಗಳು ಚೀನಾದಲ್ಲಿ ಉದ್ಯೋಗ ಸೃಷ್ಟಿಸಿದವು. ನಾವು, ಅಮೆರಿಕನ್ನರು, ಪಾಶ್ಚಿಮಾತ್ಯರು ಅನುಭೋಗಿಗಳಾದೆವು. ಭಾರತವು ಉತ್ಪಾದನಾ ಚಟುವಟಿಕೆ ಹೆಚ್ಚಿಸುವ ಕುರಿತಂತೆ ಯೋಚಿಸಬೇಕಿದೆ’ಎಂದಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.