ಭಾರತ ಪ್ರವಾಸದಲ್ಲಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿದರು.
ಪಿಟಿಐ ಚಿತ್ರ
ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತ ಹೊಂದಿರುವ ‘ಶೂನ್ಯ ಸಹಿಷ್ಣು’ ನೀತಿಯನ್ನು ತನ್ನ ಪಾಲುದಾರ ರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಭಾರತ ನಿರೀಕ್ಷಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದರು.
‘ದುಷ್ಕೃತ್ಯಗಳ ಎಸಗುವವರನ್ನು ಸಂತ್ರಸ್ತರು ಅಥವಾ ಬಲಿಪಶುಗಳಿಗೆ ಸಮನಾಗಿ ನೋಡುವುದನ್ನು ಭಾರತ ಎಂದಿಗೂ ಸಹಿಸುವುದಿಲ್ಲ’ ಎಂದು ಅವರು ಹೇಳಿದರು.
ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ವಿಷಯಗಳ ಕುರಿತು ಪರಿಶೀಲಿಸಲು ಎರಡು ದಿನಗಳ ಭಾರತ ಭೇಟಿ ಕೈಗೊಂಡಿದ್ದು, ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಜೈಶಂಕರ್ ಈ ಕುರಿತು ತಿಳಿಸಿದರು. ಈ ಮೂಲಕ ಅವರು ಜಾಗತಿಕ ಸಮುದಾಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
ಆರ್ಥಿಕ, ವಲಸೆ ಸಂಬಂಧಗಳನ್ನು ಬಲಪಡಿಸುವುದು ಮತ್ತು ಬ್ರಿಟನ್ ವ್ಯವಹಾರಗಳಿಗೆ ಇನ್ನಷ್ಟು ಅವಕಾಶಗಳು ದೊರೆಯುವಂತೆ ಮಾಡುವುದು ಲ್ಯಾಮಿ ಅವರ ಭಾರತ ಭೇಟಿಯ ಪ್ರಮುಖ ಉದ್ದೇಶಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸುವುದಕ್ಕೂ ಮುನ್ನ ಲ್ಯಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕಾಗಿ ಬ್ರಿಟನ್‌ಗೆ ಧನ್ಯವಾದ ಅರ್ಪಿಸುವುದಾಗಿ ಜೈಶಂಕರ್ ಇದೇ ವೇಳೆ ತಿಳಿಸಿದರು. ಪಾಕಿಸ್ತಾನದ ಕಡೆಯಿಂದ ಬರುವ ಗಡಿಯಾಚೆಗಿನ ಭಯೋತ್ಪಾದನೆಯ ಸವಾಲನ್ನು ಎದುರಿಸಬೇಕಾದುದ್ದರ ಕುರಿತು ಅವರು ಇದೇ ವೇಳೆ ವಿವರಿಸಿದರು.
ಇತ್ತೀಚೆಗಷ್ಟೇ ಭಾರತ– ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಇದು ನಿಜವಾಗಿಯೂ ಒಂದು ಮೈಲಿಗಲ್ಲು ಎಂದು ಜೈಶಂಕರ್ ಬಣ್ಣಿಸಿದರು.
‘ಹೊಸ ಜಾಗತಿಕ ಕಾಲಮಾನದಲ್ಲಿ ನಾವು ಭಾರತದ ಜತೆಗೆ ಆಧುನಿಕ ಪಾಲುದಾರಿಕೆಯನ್ನು ಹೊಂದ ಬಯಸುತ್ತೇವೆ. ಅಭಿವೃದ್ಧಿ, ನವೀನ ತಂತ್ರಜ್ಞಾನ ಮತ್ತು ಹವಾಮಾನ ಬಿಕ್ಕಟ್ಟು ನಿಭಾಯಿಸುವುದಕ್ಕೆ ಒತ್ತು ನೀಡಲಿದ್ದೇವೆ. ಅಲ್ಲದೆ ವಲಸೆ ಮತ್ತು ಜನರ ಭದ್ರತೆ ವಿಷಯಗಳು ಪ್ರಮುಖ ಆದ್ಯತೆಗಳಾಗಿವೆ’ ಎಂದು ಅವರು ಡೇವಿಡ್ ಲ್ಯಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.