
ಮುಖಿ ಹೆಸರಿನ ಚೀತಾ
ಶಿಯೋಪುರ್: ಭಾರತದಲ್ಲೇ ಜನಿಸಿದ ಚೀತಾ 'ಮುಖಿ' ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ಹರ್ಷ ವ್ಯಕ್ತಪಡಿಸಿದ್ದಾರೆ.
'ಭಾರತದಲ್ಲೇ ಹುಟ್ಟಿರುವ ಚೀತಾ 'ಮುಖಿ', ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಐತಿಹಾಸಿಕ ಮೈಲುಗಲ್ಲು ಸಾಧಿಸಲಾಗಿದೆ. ತಾಯಿ ಹಾಗೂ ಮರಿಗಳು ಆರೋಗ್ಯವಾಗಿವೆ' ಎಂದು ಬರೆದುಕೊಂಡಿದ್ದಾರೆ.
ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ ಉಪಕ್ರಮದಲ್ಲಿ ಇದೊಂದು ಅಭೂತಪೂರ್ವ ಯಶಸ್ಸು ಎಂದೂ ಬಣ್ಣಿಸಿದ್ದಾರೆ.
ಯೋಜನೆಯ ನಂತರ ಭಾರತದಲ್ಲಿ ಜನಿಸಿದ ಮೊದಲ ಹೆಣ್ಣು ಚೀತಾ ಎನಿಸಿದ್ದ 'ಮುಖಿ', ಇದೀಗ ಮತ್ತೊಂದು ಶ್ರೇಯಕ್ಕೂ ಭಾಜನವಾಗಿದೆ. ಮರಿಗಳಿಗೆ ಜನ್ಮ ನೀಡಿದ ಭಾರತ ಮೂಲದ ಮೊದಲ ಚೀತಾ ಎನಿಸಿಕೊಂಡಿದೆ. ಮುಖಿ ವಯಸ್ಸು ಸದ್ಯ 33 ತಿಂಗಳು.
'ಇದು ಚೀತಾ ಯೋಜನೆಯ ಹೆಗ್ಗುರುತು' ಎಂದು ಪ್ರತಿಪಾದಿಸಿರುವ ಯಾದವ್, 'ಭಾರತದಲ್ಲಿ ಜನಿಸಿದ ಚೀತಾದ ಸಂತಾನೋತ್ಪತ್ತಿ, ಯಶಸ್ವಿಯಾಗಿರುವುದು, ಇಲ್ಲಿನ ಆವಾಸಸ್ಥಾನಗಳಿಗೆ ಈ ಪ್ರಭೇದದ ಪ್ರಾಣಿಗಳು ಹೊಂದಿಕೊಳ್ಳಲಿವೆ ಎಂಬುದಕ್ಕೆ ಬಲವಾದ ಕುರುಹಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಹಲವು ದಶಕಗಳ ಹಿಂದೆಯೇ ಅಳಿದುಹೋಗಿರುವ ಚೀತಾಗಳನ್ನು ಮರಿಪರಿಚಯಿಸುವ ಉದ್ದೇಶದಿಂದ, ಚೀತಾಗಳ ಅಂತರ ಖಂಡ ಹಸ್ತಾಂತರ ಯೋಜನೆಯನ್ನು 2022ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿದೆ. ಅದರ ಭಾಗವಾಗಿ ಆಫ್ರಿಕಾ ಖಂಡದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗಿತ್ತು. ನಮೀಬಿಯಾದಿಂದ ಎಂಟು ಹಾಗೂ 2023ರ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.