ADVERTISEMENT

ಲಡಾಖ್ ಗಡಿ ಸಂಘರ್ಷ: ಸಂಪೂರ್ಣ ಹಿಂದೆ ಸರಿದ ಭಾರತ–ಚೀನಾ ಸೇನಾಪಡೆಗಳು

ಪಿಟಿಐ
Published 6 ಆಗಸ್ಟ್ 2021, 15:50 IST
Last Updated 6 ಆಗಸ್ಟ್ 2021, 15:50 IST
ಪೂರ್ವ ಲಡಾಖ್‌ನ ಗಡಿ ಭಾಗವಾದ ಲುಕುಂಗ್‌ನ ದೃಶ್ಯ (ಸಂಗ್ರಹ ಚಿತ್ರ)
ಪೂರ್ವ ಲಡಾಖ್‌ನ ಗಡಿ ಭಾಗವಾದ ಲುಕುಂಗ್‌ನ ದೃಶ್ಯ (ಸಂಗ್ರಹ ಚಿತ್ರ)   

ನವದೆಹಲಿ: ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ಸುಮಾರು 15 ತಿಂಗಳ ಬಳಿಕ ಭಾರತ ಮತ್ತು ಚೀನಾ ತಮ್ಮ ಸೇನೆಗಳನ್ನು ಸಂಪೂರ್ಣವಾಗಿ ವಾಪಸ್‌ ಕರೆಸಿಕೊಂಡಿವೆ.

‘ಸಂಘರ್ಷ ನಡೆದ ಪ್ರದೇಶಗಳಿಂದ ಸೇನೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಕುರಿತು ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಇದೀಗ ಸೇನೆಗಳನ್ನು ಹಿಂಪಡೆದಿರುವುದರಿಂದ ಲಡಾಖ್‌ನಲ್ಲಿ ಪರಿಸ್ಥಿತಿ ಸುಧಾರಿಸಿದೆ’ ಎಂದು ಹೇಳಲಾಗಿದೆ.

ಈ ಹಿಂದೆ ನಡೆದ ಮಾತುಕತೆಯ ವೇಳೆ ಡೆಪ್‌ಸ್ಯಾಂಗ್‌, ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್ಸ್‌ ಪ್ರದೇಶದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಜತೆಗೆ, ಬಾಕಿ ಇರುವ ವಿವಾದಾತ್ಮಕ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಎರಡೂ ದೇಶಗಳ ಸೇನೆಯ ಅಧಿಕಾರಿಗಳು ಒಪ್ಪಿಕೊಂಡಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಆಗಸ್ಟ್‌ 4 ಮತ್ತು 5ರಂದು ಭಾರತ ಸೇನೆ ತೆರವುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 31ರಂದು ನಡೆದ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್‌ಗಳ ಮಟ್ಟದ 12ನೇ ಸುತ್ತಿನ ಮಾತುಕತೆಯ ಅನುಗುಣವಾಗಿ ಈ ಪ್ರಕ್ರಿಯೆ ನಡೆದಿದೆ ಎಂದು ಸೇನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.