ADVERTISEMENT

ಶಿಕ್ಷಣ ಸಂಸ್ಥೆಗಳು ಸೈಬರ್ ದಾಳಿಯ ದೊಡ್ಡ ಗುರಿ: ವರದಿ

ಪಿಟಿಐ
Published 1 ಮೇ 2022, 13:56 IST
Last Updated 1 ಮೇ 2022, 13:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಅಮೆರಿಕ, ಬ್ರಿಟನ್, ಇಂಡೊನೇಷ್ಯಾ, ಬ್ರೆಜಿಲ್ ಬಳಿಕ ಭಾರತದ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳು ಸೈಬರ್ ದಾಳಿಯ ದೊಡ್ಡಗುರಿಗಳಾಗಿವೆ’ ಎಂದು ವರದಿಯೊಂದು ಹೇಳಿದೆ.

‘ಕೋವಿಡ್–19 ಸಮಯದಲ್ಲಿ ದೂರಶಿಕ್ಷಣ ಕಲಿಕೆಯ ಭಾಗವಾಗಿ ಅಳವಡಿಸಿಕೊಂಡ ಶಿಕ್ಷಣದ ಡಿಜಿಟಲೀಕರಣ ಮತ್ತು ಆನ್‌ಲೈನ್ ಕಲಿಕಾ ವೇದಿಕೆಗಳು ಸೈಬರ್ ದಾಳಿಯನ್ನು ವಿಸ್ತರಣೆಗೆ ಮುಖ್ಯ ಪ್ರಚೋದಕಗಳಾಗಿವೆ’ ಎಂದು ಸಿಂಗಪುರ ಮೂಲದ ಕ್ಲೌಡ್‌ಸೆಕ್‌ನ ‘ಥ್ರೆಟ್ ರಿಸರ್ಚ್ ಅಂಡ್ ಇನ್‌ಫಾರ್ಮೇಷನ್ ಅನಲಿಟಿಕ್ಸ್’ ವಿಭಾಗದ ವರದಿಯು ಹೇಳಿದೆ.

‘ಜಾಗತಿಕ ಶಿಕ್ಷಣ ಕ್ಷೇತ್ರವನ್ನು ಗುರಿಯಾಗಿಸಿಕೊಂಡ ಸೈಬರ್ ಬೆದರಿಕೆಗಳು’ ಎನ್ನುವ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲಾಗಿತ್ತು. ಈ ಅಧ್ಯಯನದ ವರದಿ ಅನ್ವಯ, ‘2021ಕ್ಕೆ ಹೋಲಿಸಿದರೆ, 2022ರ ಮೊದಲ ಮೂರು ತಿಂಗಳಲ್ಲಿ ಜಾಗತಿಕ ಶಿಕ್ಷಣ ಕ್ಷೇತ್ರಕ್ಕೆ ಎದುರಾಗುವ ಸೈಬರ್ ಬೆದರಿಕೆಗಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ’ ಎಂದು ಅಂಕಿ–ಅಂಶಗಳ ಮೂಲಕ ಕಂಡುಕೊಳ್ಳಲಾಗಿದೆ.

‘ಕಳೆದ ವರ್ಷ ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಪತ್ತೆಯಾದ ಸೈಬರ್ ದಾಳಿಯ ಬೆದರಿಕೆಗಳ ಪೈಕಿ ಶೇ 58 ಬೆದರಿಕೆಗಳು ಭಾರತೀಯ ಅಥವಾ ಭಾರತ ಮೂಲದ ಶಿಕ್ಷಣ ಸಂಸ್ಥೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಗುರಿಯಾಗಿರಿಸಿಕೊಂಡಿವೆ. ಹೀಗೆ ಗುರಿಯಾಗಿಸಿಕೊಂಡ ಶಿಕ್ಷಣ ಸಂಸ್ಥೆಗಳಲ್ಲಿ ಬೈಜು, ಕೋಯಿಕ್ಕೋಡ್‌ನ ಐಐಎಂ ಮತ್ತು ತಮಿಳುನಾಡಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವೂ ಸೇರಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ದಿನೇದಿನೇ ಬೆಳವಣಿಗೆ ಕಾಣುತ್ತಿರುವ ಜಾಗತಿಕ ಶಿಕ್ಷಣ ಮತ್ತು ತರಬೇತಿ ಮಾರುಕಟ್ಟೆಯ ವಹಿವಾಟು 2025ರ ವೇಳೆಗೆ ₹ 554 ಲಕ್ಷ ಕೋಟಿ ತಲುಪುವ ನಿರೀಕ್ಷೆ ಇದ್ದು, ಸೈಬರ್ ಅಪರಾಧಿಗಳು ಇದರತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಕ್ಲೌಡ್‌ಸೆಕ್‌ನ ಪ್ರಧಾನ ಸಂಶೋಧಕ ದರ್ಶಿತ್ ಆಶಾರಾ ವಿಶ್ಲೇಷಿಸಿದ್ದಾರೆ.

‘ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು ಮತ್ತು ಸಿಬ್ಬಂದಿ ಅನುಮಾನಾಸ್ಪದ ಇ– ಮೇಲ್‌ಗಳು, ಸಂದೇಶಗಳು ಮತ್ತು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು. ಯಾವುದೇ ಅಪ್ಲಿಕೇಷನ್‌ಗಳನ್ನು ಪರಿಶೀಲಿಸದೇ ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬಾರದು. ಆನ್‌ಲೈನ್‌ನಲ್ಲಿ ತಾವು ಬಳಸುವ ಖಾತೆಗಳಿಗೆ ಇತರರು ಸುಲಭವಾಗಿ ಬಳಸಬಹುದಾದ ಅಥವಾ ಊಹೆ ಮಾಡಬಹುದಾದ ಪಾಸ್‌ವರ್ಡ್‌ಗಳನ್ನು ಅಳವಡಿಸಬಾರದು. ಯಾವುದೇ ಸಂಸ್ಥೆಗಳು ಕಾನೂನುಬಾಹಿರವಾದ ಐಪಿ ವಿಳಾಸಗಳನ್ನು ನಿರ್ಬಂಧಿಸಬೇಕು ’ ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.