ADVERTISEMENT

ಬಿಹಾರ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 21:14 IST
Last Updated 6 ನವೆಂಬರ್ 2025, 21:14 IST
ಬಿಹಾರ ಚುನಾವಣೆಗೆ ಮತದಾನ  (ಸಂಗ್ರಹ ಚಿತ್ರ)
ಬಿಹಾರ ಚುನಾವಣೆಗೆ ಮತದಾನ (ಸಂಗ್ರಹ ಚಿತ್ರ)   

ಪಟ್ನಾ: ಬಿಹಾರದ ಅರ್ಧದಷ್ಟು ಜನರು ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ಬಾರಿ ನಿತೀಶ್‌ ಕುಮಾರ್‌, ಲಾಲೂ, ರಾಬ್ಡಿ ದೇವಿ ಸ್ಪರ್ಧಿಸಿರಲಿಲ್ಲ. 

ಪಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಭಕ್ತಿಯಾರ್‌ಪುರದ ಮತಗಟ್ಟೆಯಲ್ಲಿ ನಿತೀಶ್ ಕುಮಾರ್‌ ಮೊದಲಿಗರಾಗಿ ಹಕ್ಕು ಚಲಾಯಿಸಿದರು. ಲಾಲೂ ಮತ್ತು ಕುಟುಂಬ ಸದಸ್ಯರು ಪಟ್ನಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬೆಗೂಸರಾಯ್‌ನಲ್ಲಿ ಗರಿಷ್ಠ ಹಾಗೂ ಶೇಖಪುರದಲ್ಲಿ ಕನಿಷ್ಠ ಮತದಾನ ದಾಖಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಂತರ ಬಿಹಾರದಲ್ಲಿ ಒಟ್ಟು ಮತದಾರರ ಸಂಖ್ಯೆ 7.9 ಕೋಟಿಯಿಂದ 7.4 ಕೋಟಿಗೆ ಇಳಿಕೆಯಾಗಿತ್ತು.

ಮೊದಲ ಹಂತದ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ (ರಘೋಪುರ), ತೇಜ್‌ ಪ್ರತಾಪ್‌ (ಮಹುವಾ), ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ (ತಾರಾಪುರ), ವಿಜಯ್‌ ಸಿನ್ಹಾ (ಲಖಿಸರೈ), ಮೈಥಿಲಿ ಠಾಕೂರ್‌ (ಅಲಿನಗರ), ಅನಂತ್‌ ಸಿಂಗ್‌ (ಮೊಕಾಮ) ದಿ. ಶಹಾಬುದ್ದೀನ್‌ ಪುತ್ರ ಒಸಾಮ (ರಘುನಂತಪುರ) ಸೇರಿದಂತೆ 121 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ADVERTISEMENT

ದರ್ಭಂಗಾದ ಕುಶೇಶ್ವರ ಆಸ್ಥಾನ್ ಕ್ಷೇತ್ರದಲ್ಲಿ ಪ್ರವಾಹದ ಸಂಕಷ್ಟದ ನಡುವೆಯೂ ಮತದಾರರು ಧೈರ್ಯದಿಂದ ಮತದಾನದಲ್ಲಿ ಭಾಗವಹಿಸಿದರು.

‘ಎನ್‌ಡಿಎ ಮೈತ್ರಿಕೂಟ ಪ್ರಾಬಲ್ಯ ಹೊಂದಿರುವ ಕಡೆ ಮತದಾನವನ್ನು ಉದ್ದೇಶಪೂರ್ವಕವಾಗಿಯೇ ನಿಧಾನಗೊಳಿಸಲಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ನಮ್ಮ ಆರೋಪವನ್ನು ಚುನಾವಣಾ ಆಯೋಗವು ತಕ್ಷಣವೇ ತಿರಸ್ಕರಿಸಿತು’ ಎಂದು ಆರ್‌ಜೆಡಿ ‘ಎಕ್ಸ್‌’ನಲ್ಲಿ ಆರೋಪಿಸಿದೆ.

ನುಸುಳುಕೋರರು ದೇಶದ ಭದ್ರತೆಗೆ ಕಂಟಕವಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಹಾರವು ಅಕ್ರಮ ವಲಸಿಗರು, ನುಸುಳುಕೋರರಿಂದ ಮುಕ್ತವಾಗಲಿದೆ
ಅಮಿತ್‌ ಶಾ, ಕೇಂದ್ರ ಗೃಹ ಸಚಿವ
‘ಬಿಜೆಪಿ ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಮತ ಕಳವಿಗೆ ಪ್ರಯತ್ನಿಸಬಹುದು. ಇದನ್ನು ತಡೆಯುವ ಜವಾಬ್ದಾರಿ ಯುವ ಮತದಾರರದ್ದು
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.