ADVERTISEMENT

ವಾಯು ಮಾಲಿನ್ಯ: ದೆಹಲಿ ನಿವಾಸಿಗಳಿಗೆ ಆರೋಗ್ಯ ವಿಮೆ ದುಬಾರಿ?

ಶೇ 10–15ರಷ್ಟು ಪ್ರೀಮಿಯಂ ಹೆಚ್ಚಳಕ್ಕೆ ವಿಮಾ ಕಂಪನಿಗಳ ಚಿಂತನೆ

ರಾಯಿಟರ್ಸ್
Published 21 ಫೆಬ್ರುವರಿ 2025, 14:46 IST
Last Updated 21 ಫೆಬ್ರುವರಿ 2025, 14:46 IST
-
-   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿ ವಿಮೆ ಕ್ಲೇಮುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದು, ಹೊಸದಾಗಿ ವಿಮೆ ಪಾಲಿಸಿ ಪಡೆಯುವವರಿಗೆ ಹೊರೆಯಾಗುವ ಸಾಧ್ಯತೆ ಇದೆ.

ಹೊಸದಾಗಿ ಆರೋಗ್ಯ ವಿಮೆ ತೆಗೆದುಕೊಳ್ಳುವ ದೆಹಲಿ ನಿವಾಸಿಗಳಿಂದ, ಶೇ 10ರಿಂದ ಶೇ 15ರಷ್ಟು ಅಧಿಕ ಪ್ರೀಮಿಯಂ ಸಂಗ್ರಹಿಸಲು ವಿಮಾ ಕಂಪನಿಗಳು ಚಿಂತನೆ ನಡೆಸಿವೆ ಎಂದು ಹೇಳಲಾಗಿದೆ.

ಪ್ರೀಮಿಯಂ ಹೆಚ್ಚಳ ಮಾಡುವ ಕುರಿತು ವಿಮಾ ಕಂಪನಿಗಳ ನಡುವೆ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ, ಭಾರತೀಯ ವಿಮಾ ಮತ್ತು ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ಕಂಪನಿಗಳ ಈ ಬೇಡಿಕೆಯನ್ನು ಅನುಮೋದಿಸಬೇಕಿದೆ.

ADVERTISEMENT

ಒಂದು ವೇಳೆ, ಈ ಬೇಡಿಕೆಗೆ ಅನುಮೋದನೆ ದೊರೆತಲ್ಲಿ, ಭಾರತದಲ್ಲಿ ಮೊದಲ ಬಾರಿಗೆ, ಆರೋಗ್ಯ ವಿಮೆ ಪ್ರೀಮಿಯಂ ನಿರ್ಧರಿಸುವಲ್ಲಿ ವಾಯು ಮಾಲಿನ್ಯವನ್ನು ಒಂದು ಅಂಶವನ್ನಾಗಿ ಪರಿಗಣಿಸಿದಂತಾಗಲಿದೆ.

ಅಲ್ಲದೇ, ಮುಂದಿನ ದಿನಗಳಲ್ಲಿ ವಿಮಾ ಕಂಪನಿಗಳು ದೇಶದ ಇತರ ನಗರಗಳಲ್ಲಿ ಆರೋಗ್ಯ ವಿಮೆಯ ಪ್ರೀಮಿಯಂ ಹೆಚ್ಚಳ ಮಾಡುವುದನ್ನು ಸಮರ್ಥಿಸಿಕೊಳ್ಳುವುದಕ್ಕೆ ಈ ಅಂಶ ಬಳಸಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಂತಾಗಲಿದೆ.

ಆರೋಗ್ಯ ಸಮಸ್ಯೆ: ವಾಯುವಿನ ಗುಣಮಟ್ಟ ಕುಸಿತದಿಂದ ದೆಹಲಿ ನಿವಾಸಿಗಳಲ್ಲಿ ಕಳೆದ ವರ್ಷ ಆಸ್ತಮಾ, ಉಸಿರಾಟದ ತೊಂದರೆ (ಸಿಒಪಿಡಿ), ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡಿದ್ದವು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ, 2024ರಲ್ಲಿ ಇಂತಹ ಆರೋಗ್ಯ ಸಮಸ್ಯೆಯಿಂದ ಬಾಧಿತರ ಸಂಖ್ಯೆ ಹೆಚ್ಚು ಇತ್ತು ಎಂದು ವಿಮಾ ಕಂಪನಿಗಳ ಐವರು ಪ್ರತಿನಿಧಿಗಳು ಹೇಳುತ್ತಾರೆ.

‘ವಿಮಾ ಪಾಲಿಸಿಗಳ ಪ್ರೀಮಿಯಂ ನಿಗದಿ ಮಾಡುವ ವೇಳೆ, ವಾಯು ಮಾಲಿನ್ಯವನ್ನು ಪ್ರತ್ಯೇಕ ಅಂಶ ಎಂದೇ ಭಾವಿಸುವುದನ್ನು ಶುರು ಮಾಡಬೇಕಿದೆ. ಅತಿ ಹೆಚ್ಚು ವಾಯುಮಾಲಿನ್ಯ ಬಾಧಿತ ಪ್ರದೇಶಗಳಿಗೆ ನಿರ್ದಿಷ್ಟ ಪ್ರೀಮಿಯಂ ನಿಗದಿ ಮಾಡಲು ಆರಂಭಿಸಬಹುದಾಗಿದೆ’ ಎಂದು ಆರೋಗ್ಯ ವಿಮೆ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಕಂಪನಿಯಾದ ಸ್ಟಾರ್‌ ಹೆಲ್ತ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಅಮಿತಾಭ್‌ ಜೈನ್‌ ಹೇಳುತ್ತಾರೆ.

ವ್ಯಾಪಕ ಪರಿಣಾಮ

ದೆಹಲಿಯಲ್ಲಿ ಮಾತ್ರವಲ್ಲ ದೇಶದ ಕೆಲ ಇತರ ನಗರಗಳಲ್ಲಿ ಕೂಡ ವಾಯುವಿನ ಗುಣಮಟ್ಟ ಆತಂಕಕಾರಿ ಮಟ್ಟದಲ್ಲಿ ಇರುವುದು ದಾಖಲಾಗಿದೆ. ಸ್ವೀಡನ್‌ ಮೂಲದ ಐಕ್ಯೂಏರ್‌ ಸಂಸ್ಥೆ ನಡೆಸುವ ಸಮೀಕ್ಷೆ ಪ್ರಕಾರ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ವಿಶ್ವದ ನಗರಗಳ ಪಟ್ಟಿಯಲ್ಲಿ ದೆಹಲಿ ನಂತರದ ಸ್ಥಾನಗಳಲ್ಲಿ ಮುಂಬೈ ಮತ್ತು ಕೋಲ್ಕತ್ತ ಇವೆ. ‘ವಿಷಯುಕ್ತ ಗಾಳಿಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಜೊತೆಗೆ ಪದೇಪದೇ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸುವ ಅಗತ್ಯವಿದೆ’ ಎಂದು ಪಿಡಬ್ಲ್ಯುಸಿ ಇಂಡಿಯಾ ಫೈನಾನ್ಸಿಯಲ್ ಸರ್ವೀಸಸ್ ಅಡ್ವೈಸರಿ ಲೀಡರ್ ಜಯದೀಪ್ ರಾಯ್‌ ಹೇಳುತ್ತಾರೆ. ಹಿರಿಯ ನಾಗರಿಕರು ಮಕ್ಕಳು ಹೆಚ್ಚುಕಾಲ ಹೊರಗಡೆಯೇ ಕೆಲಸ ನಿರ್ವಹಿಸುವವರು ಹಾಗೂ ದೀರ್ಘಕಾಲದಿಂದ ಉಸಿರಾಟದ ತೊಂದರೆ ಹೊಂದಿರುವವರು ಹೆಚ್ಚು ಪ್ರೀಮಿಯಂ ಭರಿಸಬೇಕಾಗುತ್ತದೆ. ವಿಮಾ ಕಂಪನಿಗಳ ಈ ಯೋಜನೆಗೆ ಒಂದು ವೇಳೆ ಪ್ರಾಧಿಕಾರವು ಅನುಮೋದನೆ ನೀಡಿದಲ್ಲಿ ಅಗತ್ಯವಿರುವವರಿಗೆ  ಆರೋಗ್ಯ ವಿಮೆ ಕೈಗೆಟುಕುವುದಿಲ್ಲ ಎಂದು ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.