ADVERTISEMENT

'ವಾಗಿರ್‌' ಜಲಾಂತರ್ಗಾಮಿ ಲೋಕಾರ್ಪಣೆ

ಪಿಟಿಐ
Published 12 ನವೆಂಬರ್ 2020, 21:03 IST
Last Updated 12 ನವೆಂಬರ್ 2020, 21:03 IST
ದಕ್ಷಿಣ ಮುಂಬೈನ ಪೋರ್ಟ್‌ನಲ್ಲಿರುವ ಜಲಾಂತರ್ಗಾಮಿ ವಾಗಿರ್‌
ದಕ್ಷಿಣ ಮುಂಬೈನ ಪೋರ್ಟ್‌ನಲ್ಲಿರುವ ಜಲಾಂತರ್ಗಾಮಿ ವಾಗಿರ್‌   

ಮುಂಬೈ: ಸ್ಕಾರ್ಪೀನ್ ಸರಣಿಯ ಐದನೇ ಜಲಾಂತರ್ಗಾಮಿ ನೌಕೆಯನ್ನು ಮಡಗಾಂವ್ ಡಾಕ್ ಲಿಮಿಟೆಡ್‌ (ಎಂಡಿಎಲ್‌) ಗುರುವಾರ ಲೋಕಾರ್ಪಣೆ ಮಾಡಿದೆ. ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನೌಕೆಯನ್ನು ಲೋಕಾರ್ಪಣೆ ಮಾಡಿದರು. ಈ ನೌಕೆಯನ್ನು ಭಾರತದಲ್ಲೇ ನಿರ್ಮಿಸಲಾಗಿದೆ.

ಸ್ಕಾರ್ಪೀನ್‌ ಸರಣಿಯ ಐದನೇ ನೌಕೆಯನ್ನು ಯಾರ್ಡ್‌ 11879 ಎಂದು ಕರೆಯಲಾಗುತ್ತಿತ್ತು. ಸಚಿವ ನಾಯಕ್ ಅವರ ಪತ್ನಿ ವಿಜಯ ನಾಯಕ್ ಅವರು ಲೋಕಾರ್ಪಣೆಯ ನಂತರ ನೌಕೆಗೆ ‘ವಾಗಿರ್‌’ ಎಂದು ನಾಮಕರಣ ಮಾಡಿದರು.

ಪ್ರಾಜೆಕ್ಟ್-75 ಹೆಸರಿನ ಯೋಜನೆ ಅಡಿ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಕಲ್ವರಿ ಕ್ಲಾಸ್‌ನ ಈ ಜಲಾಂತರ್ಗಾಮಿಗಳನ್ನು ಫ್ರಾನ್ಸ್‌ನಲ್ಲಿ ವಿನ್ಯಾಸ ಮಾಡಲಾಗಿದೆ. ಈ ನೌಕೆಗಳನ್ನು ಎಂಡಿಎಲ್‌ ಭಾರತದಲ್ಲಿ ನಿರ್ಮಿಸಲಿದೆ. ಈ ಸರಣಿಯ ಐಎನ್‌ಎಸ್ ಕಲ್ವರಿ ಮತ್ತು ಐಎನ್‌ಎಸ್ ಖಾಂಡೇರಿ ನೌಕೆಗಳು ಈಗಾಗಲೇ ನೌಕಾಪಡೆಗೆ ಸೇರ್ಪಡೆ ಆಗಿವೆ.

ADVERTISEMENT

ಮೂರು ಮತ್ತು ನಾಲ್ಕನೇ ನೌಕೆಗಳಾದ ಕಾರಂಜ್ ಮತ್ತು ವೇಲ ಲೋಕಾರ್ಪಣೆಯಾಗಿದ್ದು, ಪರೀಕ್ಷಾರ್ಥ ಚಾಲನೆಯ ಹಂತದಲ್ಲಿವೆ. ಪರೀಕ್ಷೆಗಳು ಪೂರ್ಣಗೊಂಡ ನಂತರ ನೌಕಾಪಡೆಗೆ ಸೇರ್ಪಡೆಯಾಗಲಿವೆ. ಈಗ ವಾಗಿರ್‌‌ ನೌಕೆಯು ಹಲವು ಹಂತಗಳ ಪರೀಕ್ಷೆಗೆ ಒಳಪಡಲಿದೆ.

ವೈಶಿಷ್ಟ್ಯಗಳು

* ಅತ್ಯಾಧುನಿಕ ತಂತ್ರಜ್ಞಾನದ ನೌಕೆ. ಸಮುದ್ರದ ಆಳದಲ್ಲಿ ಇದ್ದಾಗ ಎದುರಾಳಿ ಪಡೆಗಳ ಕಣ್ಗಾವಲಿಗೆ ಸಿಲುಕುವುದು ಕಷ್ಟಸಾಧ್ಯ

* ಗುರಿ ನಿರ್ದೇಶಿತ ಕ್ಷಿಪಣಿ ಮತ್ತು ಟಾರ್ಪೆಡೊಗಳ ಮೂಲಕ ದಾಳಿ ನಡೆಸುವ ಸಾಮರ್ಥ್ಯ

* ಯುದ್ಧನೌಕೆ ನಿರೋಧಕ ಕ್ಷಿಪಣಿ ದಾಳಿ ಸಾಮರ್ಥ್ಯ. ನೀರಿನೊಳಗಿನಿಂದಲೂ ದಾಳಿ ಮಾಡಲು ಸಾಧ್ಯ. ನೀರಿನ ಮೇಲ್ಮೈನಿಂದಲೂ ದಾಳಿ ಮಾಡುವ ಸಾಮರ್ಥ್ಯ

* ಎಲ್ಲಾ ಸ್ವರೂಪದ ವಾತಾವರಣಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಸ್ಕಾರ್ಪೀನ್ ಸರಣಿಯ ನೌಕೆಗಳ ಹೆಗ್ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.