ಪ್ರಾತಿನಿಧಿಕ ಚಿತ್ರ
ಸಿಂಗಪುರ: ಸಿಂಗಪುರದಲ್ಲಿ ಟ್ಯಾಕ್ಸಿ ಚಾಲಕ ಆಗಿರುವ ಭಾರತ ಮೂಲದ ಮೈಕೆಲ್ ರಾಜ್ ಎಂಬಾತ ಕಳ್ಳತನದ ನಾಲ್ಕು ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ಒಂದು ವರ್ಷ ಐದು ತಿಂಗಳ ಅವಧಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.
ರಾಜ್ 70 ವರ್ಷ ವಯಸ್ಸಿನ ತನ್ನ ತಾಯಿಯ ಬಳಿಯಿದ್ದ ಅಂದಾಜು ₹27 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದ. ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ರಾಜ್ ನಿದ್ರೆ ಮಾಡುತ್ತಿದ್ದ ಪ್ರಯಾಣಿಕರಿಂದ ಮೂರು ರೋಲೆಕ್ಸ್ ವಾಚುಗಳನ್ನು ಕದ್ದು, ಮಾರಾಟ ಮಾಡಿದ್ದ. ಈ ಮೂರು ವಾಚುಗಳ ಒಟ್ಟು ಮೌಲ್ಯ ಅಂದಾಜು ₹1.24 ಕೋಟಿಗೂ ಹೆಚ್ಚು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
2021ರಲ್ಲಿ ತನ್ನ ತಾಯಿಯ ಆಭರಣ ಕಳ್ಳತನದ ಮೂಲಕ ಈತ ಕಳ್ಳತನದ ಕೃತ್ಯಗಳನ್ನು ಶುರುಮಾಡಿದ್ದ. ಆಭರಣಗಳನ್ನು ಗಿರವಿ ಇರಿಸಿ, ಅದರಿಂದ ಬಂದ ಹಣದಲ್ಲಿ ಸಾಲ ತೀರಿಸಿದ್ದ.
2022ರಲ್ಲಿ ತನ್ನ ಟ್ಯಾಕ್ಸಿ ಸೇವೆ ಪಡೆದಿದ್ದ ವ್ಯಕ್ತಿಯೊಬ್ಬ ನಿದ್ದೆಹೋಗಿದ್ದನ್ನು ಗಮನಿಸಿ, ಆ ವ್ಯಕ್ತಿಯಿಂದ ರೋಲೆಕ್ಸ್ ವಾಚು ಎಗರಿಸಿದ್ದ. ಅದೇ ವರ್ಷದಲ್ಲಿ ಈತ ತನ್ನ ಟ್ಯಾಕ್ಸಿ ಸೇವೆ ಪಡೆದುಕೊಂಡಿದ್ದ ಮಹಿಳೆಯೊಬ್ಬರಿಂದ ಇನ್ನೊಂದು ರೋಲೆಕ್ಸ್ ವಾಚು ಕಳ್ಳತನ ಮಾಡಿದ್ದ.
ಅವರಿಬ್ಬರೂ ಪೊಲೀಸರಿಗೆ ದೂರು ನೀಡಿದ್ದರು. ಆದರೆ ವಾಚುಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.