ADVERTISEMENT

Winter Session | ‘ನಾಟಕ’ದ ಮಾತು: ಜಟಾಪಟಿ ಜೋರು

ಪಿಟಿಐ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
ಸಂಸತ್ತಿನ ಮೊದಲ ದಿನದ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರು ಭಾಗವಹಿಸಿದ್ದರು.
ಸಂಸತ್ತಿನ ಮೊದಲ ದಿನದ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರು ಭಾಗವಹಿಸಿದ್ದರು.   

ನವದೆಹಲಿ:  ಸಂಸತ್ತಿನ ಅಧಿವೇಶನದ ಮೊದಲ ದಿನವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಕಲಾಪ ಆರಂಭಕ್ಕೂ ಮೊದಲು, ‘ಸಂಸತ್ತು ನಾಟಕದ ವೇದಿಕೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರೆ, ‘ಮೋದಿ ಅವರೇ ದೊಡ್ಡ ನಾಟಕಕಾರ’ ಎಂದು ಕಾಂಗ್ರೆಸ್‌ ಕುಟುಕಿತು. ಈ ಮಧ್ಯೆ ಎಸ್‌ಐಆರ್‌ ಕುರಿತ ಚರ್ಚೆ ವಿಚಾರವಾಗಿ ಆಡಳಿತ–ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆದು ಕಲಾಪವು ಫಲಪ್ರದವಾಗದೆ ಮುಂದೂಡಲ್ಪಟ್ಟಿತು. 

ಪ್ರಧಾನಿ ವಾಗ್ದಾಳಿ:

‘ಸಂಸತ್ತು ನಾಟಕಕ್ಕೆ ಇರುವ ವೇದಿಕೆ ಅಲ್ಲ, ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗೆ ಇರುವ ವೇದಿಕೆ’ ಎಂದು ಪ್ರಧಾನಿ ಮೋದಿ ವಿರೋಧ ಪಕ್ಷಗಳ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.

‘ವಿಪಕ್ಷಗಳು ಸಂಸತ್ತನ್ನು ಚುನಾವಣಾ ಸಿದ್ಧತೆಯ ಅಖಾಡವಾಗಿ ಅಥವಾ ಸೋಲಿನ ನಂತರ ಹತಾಶೆಯನ್ನು ಹೊರಹಾಕುವ ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ’ ಎಂದು ಅವರು ಆರೋಪಿಸಿದರು.

ADVERTISEMENT

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸದಿದ್ದರೆ ಕಲಾಪಕ್ಕೆ ಅಡ್ಡಿಪಡಿಸುವುದಾಗಿ ವಿರೋಧ ಪಕ್ಷಗಳು ಬೆದರಿಕೆ ಹಾಕಿದ ಬೆನ್ನಲ್ಲೇ ಅವರು ಹರಿಹಾಯ್ದರು.

ಅಧಿವೇಶನ ಆರಂಭಕ್ಕೂ ಮೊದಲು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯ ನಾಟಕಕ್ಕೆ ಅಧಿವೇಶನವು ವೇದಿಕೆಯಾಗಬಾರದು. ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು. ಜವಾಬ್ದಾರಿಯ ಅರಿವಿನೊಂದಿಗೆ ನಾವು ಕೆಲಸ ಮಾಡಬೇಕು’ ಎಂದು ಹೇಳಿದರು.

‘ನಾಟಕಕ್ಕೆ ಸಾಕಷ್ಟು ವೇದಿಕೆಗಳಿವೆ. ದೇಶದಾದ್ಯಂತ ಘೋಷಣೆಗಳನ್ನು ಕೂಗಬಹುದು. ಸೋತ ಜಾಗದಲ್ಲಿ, ಮುಂದೆ ಸೋಲುವ ಜಾಗಗಳಲ್ಲಿಯೂ ಘೋಷಣೆ ಕೂಗಬಹುದು. ಆದರೆ, ಸಂಸತ್ತಿನಲ್ಲಿ ನೀತಿಗಳ ಬಗ್ಗೆ ಮಾತ್ರ ಲಕ್ಷ್ಯ ಇರಬೇಕು’ ಎಂದು ಕುಟುಕಿದರು.

ಬಿಹಾರ ವಿಧಾನಸಭೆ ಚುನಾವಣೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಬಿಹಾರ ಚುನಾವಣೆಯ ಹೀನಾಯ ಸೋಲಿನಿಂದ ವಿರೋಧ ಪಕ್ಷಗಳು ಹತಾಶೆಗೊಂಡಿವೆ. ವೈಫಲ್ಯವನ್ನು ಅರಗಿಸಿಕೊಳ್ಳಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ, ಸೋಲು ಹತಾಶೆಗೆ ಕಾರಣವಾಗಬಾರದು. ಅದೇ ರೀತಿ, ಗೆಲುವು ಸಹ ದುರಹಂಕಾರದ ವರ್ತನೆಗೆ ಎಡೆಮಾಡಿಕೊಡಬಾರದು’ ಎಂದರು.

‘ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ದೇಶದ ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿ. ವಿರೋಧ ಪಕ್ಷಗಳು ಈ ಸೋಲಿನ ಹತಾಶೆಯಿಂದ ಹೊರಬರಬೇಕು’ ಎಂದರು.

‘ವಿರೋಧ ಪಕ್ಷಗಳ ‘ಆಟ’ ಈಗ ನಡೆಯುತ್ತಿಲ್ಲ. ಅವು ತಮ್ಮ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಅವುಗಳಿಗೆ ಸಲಹೆಗಳನ್ನು ನೀಡಲು ನಾನು ಸಿದ್ಧ’ ಎಂದು ಹೇಳಿದರು.

‘ಹೊಸ ಪೀಳಿಗೆಯ ಯುವ ಸಂಸದರಿಗೆ ಅವಕಾಶಗಳನ್ನು ನೀಡಬೇಕು. ಸಂಸತ್ತಿಗೆ ಅವರ ಅನುಭವ ಬೇಕು, ಅವರ ವಿಚಾರಧಾರೆಗಳಿಂದ ದೇಶಕ್ಕೆ ಒಳಿತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ಮೋದಿ ಅವರ ಇಂಥ ಹೇಳಿಕೆ ಬೂಟಾಟಿಕೆಯಲ್ಲದೆ ಮತ್ತೇನೂ ಅಲ್ಲ. ದೊಡ್ಡ ನಾಟಕಕಾರರೇ ನಾಟಕದ ಬಗ್ಗೆ ಮಾತನಾಡುತ್ತಾರೆ
ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)
ಸಂಸತ್ತಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ; ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದಿರುವುದೇ ನಾಟಕ
ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕಿ 

ಮೋದಿ ಅತಿದೊಡ್ಡ ನಾಟಕಕಾರ: ಕಾಂಗ್ರೆಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೇ ‘ದೊಡ್ಡ ನಾಟಕಕಾರ’ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ. ‘ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನಾಟಕ ಮಾಡುತ್ತಿವೆ ಎಂಬ ಅವರ ಆರೋಪವು ‘ಬೂಟಾಟಿಕೆ’ಯಲ್ಲದೆ ಮತ್ತೇನೂ ಅಲ್ಲ’ ಎಂದು ಅದು ಕಿಡಿಕಾರಿದೆ. ‘ಪ್ರಧಾನಿ ಮೋದಿ ಅವರು ನೈಜ ವಿಚಾರಗಳ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ಮತ್ತೆ ಅದೇ ರೀತಿ ಹಳೆಯ ನಾಟಕದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್‌’ನಲ್ಲಿ ಆರೋಪಿಸಿದರು.

‘ಸರ್ಕಾರವು ಕಳೆದ 11 ವರ್ಷಗಳಿಂದ ನಿರಂತರವಾಗಿ ಸಂಸದೀಯ ಶಿಷ್ಟಾಚಾರ ಮತ್ತು ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಇಂಥ ಪ್ರಕರಣಗಳ ಪಟ್ಟಿಯೇ ಇದೆ’ ಎಂದು ಹೇಳಿದರು. ‘ಜನರ ಗಮನವನ್ನು ಬೇರೆಡೆ ಸೆಳೆಯುವ ನಾಟಕವನ್ನು ಬಿಜೆಪಿಯು ನಿಲ್ಲಿಸಬೇಕು. ನೈಜ ವಿಚಾರಗಳ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸುವ ಮೂಲಕ ಜನರನ್ನು ಎದುರಿಸಬೇಕು’ ಎಂದರು. ‘ಕಳೆದ ಮುಂಗಾರು ಅಧಿವೇಶನದಲ್ಲಿ ಕನಿಷ್ಠ 12 ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಲಾಯಿತು. ಕೆಲವು ಮಸೂದೆಗಳ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ’ ಎಂದು ಹೇಳಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ‘ಸಾರ್ವಜನಿಕ ಮಹತ್ವ ಇರುವ ವಿಷಯಗಳ ಬಗ್ಗೆ ಧ್ವನಿ ಎತ್ತಲು ವಿರೋಧ ಪಕ್ಷಗಳಿಗೆ ಅವಕಾಶ ನೀಡದಿರುವ ಪ್ರಧಾನಿ ಅವರ ಹಠಮಾರಿತನದಿಂದಲೇ ಸುಗಮ ಕಲಾಪ ಸಾಧ್ಯವಾಗುತ್ತಿಲ್ಲ’ ಎಂದರು.

ಎಸ್‌ಐಆರ್‌ ಕುರಿತ ಚರ್ಚೆಗೆ ಸರ್ಕಾರವು ಸಿದ್ಧವಿದೆ. ಆದರೆ, ಹೇಳಿದ ಸಮಯಕ್ಕೇ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿಯುವುದು ಸರಿಯಲ್ಲ
ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ

ಎಸ್‌ಐಆರ್‌ ಚರ್ಚೆಗೆ ಪಟ್ಟು: ಕಲಾಪ ಮುಂದೂಡಿಕೆ

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಚರ್ಚೆಗೆ ಆಗ್ರಹಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದವು. ಪ್ರತಿಪಕ್ಷಗಳ ಗದ್ದಲ ತೀವ್ರವಾದ ಬಳಿಕ ಕಲಾಪವನ್ನು ಒಂದು ದಿನ ಮುಂದೂಡಲಾಯಿತು.

ಇದಕ್ಕೂ ಮುನ್ನ ಎರಡು ಬಾರಿ ಕಲಾಪವನ್ನು ಮುಂದೂಡಲಾಗಿತ್ತು. ವಿಪಕ್ಷಗಳ ಹಲವು ನಾಯಕರು ಸ್ಪೀಕರ್‌ ಪೀಠದ ಸಮೀಪ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಸ್‌ಐಆರ್‌ ಕುರಿತ ಚರ್ಚೆಗೆ ಪಟ್ಟು ಹಿಡಿದು ಪ್ರತಿಭಟಿಸಿದರು.  ಅಂಡಮಾನ್‌ ನಿಕೋಬಾರ್‌ ದ್ವೀಪಗಳು ಲಕ್ಷದ್ವೀಪ ಛತ್ತೀಸಗಢ ಗೋವಾ ಗುಜರಾತ್‌ ಕೇರಳ ಮಧ್ಯಪ್ರದೇಶ ಪುದುಚೇರಿ ರಾಜಸ್ಥಾನ ತಮಿಳುನಾಡು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ತಮಿಳುನಾಡು ಪುದುಚೇರಿ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ.

ಒಂದೇ ಮಸೂದೆಗೆ ಅಂಗೀಕಾರ:
ಆಡಳಿತ ಮತ್ತು ವಿಪಕ್ಷಗಳ ಜಟಾಪಟಿ ಮಧ್ಯೆಯೇ ಮಣಿಪುರದಲ್ಲಿ ಜಿಎಸ್‌ಟಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು. 12 ನಿಮಿಷಗಳ ಶೂನ್ಯ ಅವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ 2025 ಮತ್ತು ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆ ಸೆಸ್‌ ಮಸೂದೆ 2025 ಮಂಡಿಸಿದರು. ಇವರೆಡು ಮಸೂದೆಗಳು ಮುಖ್ಯವಾಗಿ ‘ಅನಾರೋಗ್ಯಕಾರಿ ಸರಕು’ಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿವೆ.

ಐಐಎಸ್‌ಸಿ: ಇಬ್ಬರು ಸಂಸದರ ಆಯ್ಕೆಗೆ ಚುನಾವಣೆ

ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ (ಐಐಎಸ್‌ಸಿ) ಮಂಡಳಿಗೆ ಸಂಸತ್ತಿನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವ ನಿರ್ಣಯಕ್ಕೆ ಲೋಕಸಭೆಯು ಸೋಮವಾರ ಅಂಗೀಕಾರ ನೀಡಿತು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.