
ತಿರುವನಂತಪುರ: ದೇಶದಲ್ಲಿ ಕಡುಬಡತನದಿಂದ ಮುಕ್ತವಾಗಿರುವ ಮೊದಲ ರಾಜ್ಯವೆಂದು ಕೇರಳವನ್ನು ನ.1ರಂದು ‘ಪಿರವಿ ದಿನ’(ಕೇರಳ ರಾಜ್ಯ ರಚನೆಯಾದ ದಿನ) ಸಂಭ್ರಮಾಚರಣೆ ವೇಳೆ ಘೋಷಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪಿಣರಾಯಿ ವಿಜಯನ್, ‘ಎಲ್‌ಡಿಎಫ್ ಪಕ್ಷವು 2021ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ, ರಾಜ್ಯದಲ್ಲಿ ಕಡುಬಡತನ ನಿವಾರಿಸುವುದಾಗಿ ನಿರ್ಧರಿಸಿತ್ತು. ಇದರ ಅಡಿಯಲ್ಲಿ ಸರ್ಕಾರವು 64,006 ಕಡುಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ ಅವರ ಕಷ್ಟಗಳನ್ನು ನಿವಾರಿಸಲು ಪ್ರತ್ಯೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು’ ಎಂದು ಹೇಳಿದ್ದಾರೆ.
‘ರಾಜ್ಯದಲ್ಲಿ ಕಡುಬಡತನ ನಿವಾರಿಸಲು ₹1,000 ಕೋಟಿಗಳನ್ನು ಮೀಸಲಿಡಲಾಗಿತ್ತು. ಅದರಲ್ಲಿ 20,648 ಕುಟುಂಬಗಳಿಗೆ ಪ್ರತಿದಿನ ಆಹಾರ ಹಾಗೂ 2,210 ಜನರಿಗೆ ಬಿಸಿಯೂಟ ಸೌಲಭ್ಯ ಕಲ್ಪಿಸಲಾಗಿದೆ. 85,721 ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. 5,400ಕ್ಕೂ ಅಧಿಕ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. 5,522 ಮನೆಗಳ ದುರಸ್ತಿ ಮಾಡಲಾಗಿದೆ. 2,713 ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿಸಲು ಜಾಗ ನೀಡಲಾಗಿದೆ. 21,263 ಜನರಿಗೆ ಮೊದಲ ಬಾರಿಗೆ ಅಗತ್ಯ ದಾಖಲೆಗಳಾದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಪಿಂಚಣಿಯನ್ನು ಮಾಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ ಇದನ್ನು ಸಾಧಿಸಲಾಗಿದೆ. ಇದು ಸಾಮಾಜಿಕ ನ್ಯಾಯ, ಸಮಾನತೆಯನ್ನು ಸಾಧಿಸುವ ಕೇರಳ ಮಾಡೆಲ್ ಆಗಿದೆ. ನವ ಕೇರಳ ನಿರ್ಮಾಣದಲ್ಲಿ ಯಾರೂ ಕೂಡ ಹಿಂದೆ ಉಳಿಯುವುದಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.