ADVERTISEMENT

ಆ್ಯಂಟಿ- ವೈರಲ್ ಫೇಸ್ ಮಾಸ್ಕ್ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

ಐಎಎನ್ಎಸ್
Published 4 ಫೆಬ್ರುವರಿ 2022, 14:30 IST
Last Updated 4 ಫೆಬ್ರುವರಿ 2022, 14:30 IST
ರಾಯಿಟರ್ಸ್: ಪ್ರಾತಿನಿಧಿಕ ಚಿತ್ರ
ರಾಯಿಟರ್ಸ್: ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉದ್ಯಮದ ಪಾಲುದಾರರ ಸಹಯೋಗದೊಂದಿಗೆ ಭಾರತೀಯ ವಿಜ್ಞಾನಿಗಳ ತಂಡವು ಸ್ವಯಂ ಸೋಂಕು ನಿವಾರಕ 'ತಾಮ್ರ-ಆಧಾರಿತ ನ್ಯಾನೊಪಾರ್ಟಿಕಲ್-ಲೇಪಿತ ಆ್ಯಂಟಿ-ವೈರಲ್ ಫೇಸ್ ಮಾಸ್ಕ್' ಅನ್ನು ಅಭಿವೃದ್ಧಿಪಡಿಸಿದೆ.

ಜೈವಿಕ ವಿಘಟನೀಯ, ಉಸಿರಾಟಕ್ಕೆ ಅನುಕೂಲಕರ ಮತ್ತು ತೊಳೆಯಬಹುದಾದ ಮಾಸ್ಕ್ ಇದಾಗಿದ್ದು, ಕೊರೊನಾ ವೈರಸ್ ಮತ್ತು ಹಲವಾರು ಇತರ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕೋವಿಡ್-19 ರೋಗಕ್ಕೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾದ ವಿಧಾನವಾಗಿದೆ. ಸಾರ್ಸ್ ಕೋವ್ –2 ವೈರಸ್‌ನ ಪ್ರಸರಣ ವಿಧಾನವು ಮುಖ್ಯವಾಗಿ ವಾಯುಗಾಮಿಯಾಗಿರುವ ಉಸಿರಾಟದ ಕಣಗಳ ಮೂಲಕ ಆಗುತ್ತದೆ. ಅದನ್ನು ತಡೆಗಟ್ಟುವಲ್ಲಿ ಈ ಮಾಸ್ಕ್ ಪರಿಣಾಮಕಾರಿಯಾಗಿದೆ.

ADVERTISEMENT

ಆ್ಯಂಟಿವೈರಲ್ ಅಥವಾ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಪ್ರದರ್ಶಿಸದ ದುಬಾರಿ ಮಾಸ್ಕ್‌ಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ವಿಶೇಷವಾಗಿ ಜನರು ಅವುಗಳನ್ನು ಧರಿಸಿ ಜನನಿಬಿಡ ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಮತ್ತು ವೈರಸ್ ಲೋಡ್ ತುಂಬಾ ಹೆಚ್ಚಿರುವಂತಹ ಸ್ಥಳಗಳಿಗೆ ಹೋದಾಗ ವೈರಸ್‌ನಿಂದ ಪೂರ್ಣ ರಕ್ಷಣೆ ದೊರೆಯುವುದಿಲ್ಲ. ಆದರೆ, ಈ ಹೊಸ ಮಾಸ್ಕ್ ಅತ್ಯಂತ ಪರಿಣಾಮಕಾರಿಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

‘ಪ್ರಸ್ತುತ ಸನ್ನಿವೇಶದಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಕೊರೊನಾವೈರಸ್‌ನಲ್ಲಿನ ರೂಪಾಂತರಗಳು ವೇಗವಾಗಿ ಹೊರಹೊಮ್ಮುತ್ತಿವೆ. ಹಾಗಾಗಿ, ಕಡಿಮೆ ವೆಚ್ಚದ ಆಂಟಿವೈರಲ್ ಮಾಸ್ಕ್ ಅನ್ನು ಅಭಿವೃದ್ಧಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ, ವಿಜ್ಞಾನಿಗಳು ಸ್ವಯಂ ಸೋಂಕು ನಿವಾರಕ 'ತಾಮ್ರ ಆಧಾರಿತ ನ್ಯಾನೊಪಾರ್ಟಿಕಲ್ ಲೇಪಿತ ಮಾಸ್ಕ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಪ್ರಾಯೋಜಿತ ನ್ಯಾನೋ-ಮಿಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ಎಂದು ವಿಜ್ಞಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಫೇಸ್ ಮಾಸ್ಕ್ ಅನ್ನು ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ಸ್ (ಎಆರ್‌ಸಿಐ)ಯ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಮತ್ತು ಬೆಂಗಳೂರು ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಮಾಲಿಕ್ಯುಲರ್ ಬಯಾಲಜಿ(ಸಿಎಸ್‌ಐಆರ್–ಸಿಸಿಎಂಬಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಸೂಕ್ತವಾದ ಬೈಂಡರ್ ಅನ್ನು ಬಳಸಿಕೊಂಡು ಉತ್ತಮ ಕಾಟನ್ ಬಟ್ಟೆಯ ಮೇಲೆ ಈ ನ್ಯಾನೊ-ಲೇಪಿತದ ಏಕರೂಪದ ಪದರವನ್ನು ರಚಿಸಲಾಗಿದೆ. ಈ ನ್ಯಾನೊ ಕೋಟಿಂಗ್ ಬಟ್ಟೆಯು ಬ್ಯಾಕ್ಟೀರಿಯಾದ ವಿರುದ್ಧ ಶೇಕಡಾ 99.9 ಕ್ಕಿಂತ ಹೆಚ್ಚು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.