ADVERTISEMENT

ಸಾವಯವ ಸಿಕ್ಕಿಂಗೆ ವಿಶ್ವಸಂಸ್ಥೆ ಮನ್ನಣೆ

2018ನೇ ಸಾಲಿನ ‘ಫ್ಯೂಚರ್ ಪಾಲಿಸಿ ಅವಾರ್ಡ್‌’ಗೆ ಭಾರತದ ರಾಜ್ಯ ಆಯ್ಕೆ

ರಾಯಿಟರ್ಸ್
Published 13 ಅಕ್ಟೋಬರ್ 2018, 16:39 IST
Last Updated 13 ಅಕ್ಟೋಬರ್ 2018, 16:39 IST
ಫ್ಯೂಚರ್ ಪಾಲಿಸಿ ಅವಾರ್ಡ್‌’ಗೆ ಸಿಕ್ಕಿಂ ಆಯ್ಕೆ –ಚಿತ್ರಕೃಪೆ: ದಿ ಸೆಂಥಿಲ್
ಫ್ಯೂಚರ್ ಪಾಲಿಸಿ ಅವಾರ್ಡ್‌’ಗೆ ಸಿಕ್ಕಿಂ ಆಯ್ಕೆ –ಚಿತ್ರಕೃಪೆ: ದಿ ಸೆಂಥಿಲ್   

ರೋಮ್: ಸಂಪೂರ್ಣ ಸಾವಯವ ಕೃಷಿ ರಾಜ್ಯ ಎಂದು ಘೋಷಿತವಾಗಿರುವ ಭಾರತದ ಸಿಕ್ಕಿಂಗೆ ವಿಶ್ವಸಂಸ್ಥೆಯ ಪ್ರಶಸ್ತಿ ದೊರೆತಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹಾಗೂ ‘ವರ್ಲ್ಡ್‌ ಫ್ಯೂಚರ್ ಕೌನ್ಸಿಲ್’ ಜಂಟಿಯಾಗಿ ನೀಡುವ ‘ಫ್ಯೂಚರ್ ಪಾಲಿಸಿ ಅವಾರ್ಡ್‌’ಗೆ ಸಿಕ್ಕಿಂ ಆಯ್ಕೆಯಾಗಿದೆ. ಇದೇ 15ರಂದು ರೋಮ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆ ತರಲು ನೀತಿಯ ಮಟ್ಟದಲ್ಲೇ ಕ್ರಮ ತೆಗೆದುಕೊಳ್ಳುವ ದೇಶ, ರಾಜ್ಯ ಮತ್ತು ಸರ್ಕಾರಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 2009ರಿಂದ ಈ ಪ್ರಶಸ್ತಿ ಆರಂಭಿಸಲಾಗಿದೆ.

ADVERTISEMENT

2018ನೇ ಸಾಲಿನಲ್ಲಿ ‘ಕೃಷಿ–ವಿಜ್ಞಾನ’ ಕ್ಷೇತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ರಾಸಾಯನಿಕ ಗೊಬ್ಬರಗಳ ಬಳಕೆಗೆ ನಿರ್ಬಂಧ, ಸಾವಯವಕ್ಕೆ ಉತ್ತೇಜನ ಮತ್ತು ಕೃಷಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುವುದನ್ನು ಮಾನದಂಡವಾಗಿ ಇರಿಸಿಕೊಳ್ಳಲಾಗಿತ್ತು.

ಸಂಪೂರ್ಣ ಸಾವಯವ ಕೃಷಿಯನ್ನು ಸಾಧಿಸಿರುವ ಸಿಕ್ಕಿಂ ರಾಜ್ಯವು ಈ ಎಲ್ಲಾ ಮಾನದಂಡಗಳನ್ನು ಪೂರೈಸಿದ ಕಾರಣ ‘ಕೃಷಿ–ವಿಜ್ಞಾನ’ ಕ್ಷೇತ್ರದಲ್ಲಿ ‘ಫ್ಯೂಚರ್‌ ಪಾಲಿಸಿ ಅವಾರ್ಡ್‌’ಗೆ ಆಯ್ಕೆಯಾಗಿದೆ.

ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿರುವ ಕಾರಣ ವಿಶ್ವದ ಬೇರೆ–ಬೇರೆ ಕಡೆಗಳಿಂದ ರೈತರು, ವಿಜ್ಞಾನಿಗಳು ಸಿಕ್ಕಿಂಗೆ ಭೇಟಿ ನೀಡುತ್ತಿದ್ದಾರೆ. ಇದು ರಾಜ್ಯದ ಪ್ರವಾಸೋದ್ಯಮವನ್ನೂ ಬೆಳೆಸುತ್ತಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.