ADVERTISEMENT

ಮೊಬೈಲ್‌ ಬಳಕೆಗೆ ನಿರ್ಬಂಧ: ಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:47 IST
Last Updated 26 ಜುಲೈ 2019, 19:47 IST
   

ನವದೆಹಲಿ: ಕಾಲೇಜು ಹಾಸ್ಟೆಲ್‌ನಲ್ಲಿ ಮೊಬೈಲ್‌ ಫೋನ್ ಬಳಸಲು ಹೇರಿರುವ ನಿರ್ಬಂಧವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯೊಬ್ಬರುಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಕೋಯಿಕ್ಕೋಡ್‌ ಜಿಲ್ಲೆಯ ಚೇಲನ್ನೂರ್‌ನ ಶ್ರೀ ನಾರಾಯಣ ಗುರು ಕಾಲೇಜಿನ ಬಿ.ಎ ದ್ವಿತೀಯ ವರ್ಷದ ಇಂಗ್ಲಿಷ್‌ ಸಾಹಿತ್ಯ ವಿದ್ಯಾರ್ಥಿನಿ ಫಾಹೀಮಾ ಶಿರೀನ್‌ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ. ಕಾಲೇಜು ಹಾಸ್ಟೆಲ್‌ನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪದ ಮೇಲೆ ವಿದ್ಯಾರ್ಥಿನಿಯನ್ನು ಈಚೆಗೆ ಹಾಸ್ಟೆಲ್‌ನಿಂದ ಹೊರಗೆ ಹಾಕಲಾಗಿತ್ತು.

ವಿದ್ಯಾರ್ಥಿನಿಯ ತಂದೆ ಆರ್‌.ಕೆ.ಹಕ್ಸರ್ ಅವರ ಪ್ರಕಾರ, ‘ಸಂಜೆ 6 ರಿಂದ 10 ಗಂಟೆಯವರೆಗೂ ಮೊಬೈಲ್‌ ಫೋನ್‌ ಬಳಸಬಾರದು. ಈ ಅವಧಿಯಲ್ಲಿ ವಾರ್ಡನ್‌ಗೆ ಒಪ್ಪಿಸಬೇಕು ಎಂದು ಕಳೆದ ತಿಂಗಳು ನಿರ್ಬಂಧ ಹೇರಲಾಗಿತ್ತು’.

ADVERTISEMENT

‘ಈ ಕುರಿತ ಚರ್ಚಿಸಲು ಹಾಸ್ಟೆಲ್‌ ವಿದ್ಯಾರ್ಥಿಗಳ ಪೋಷಕರ ಸಭೆ ಕರೆಯಬೇಕು ಎಂಬ ಮನವಿಯನ್ನು ಕಾಲೇಜು ಆಡಳಿತ ಪುರಸ್ಕರಿಸಿಲ್ಲ. ಬಾಲಕರ ಹಾಸ್ಟೆಲ್‌ನಲ್ಲಿ ಇಂಥ ನಿರ್ಬಂಧ ಇಲ್ಲ. ಇದು, ಲಿಂಗಭೇದ ನೀತಿಗೂ ಒಂದು ನಿದರ್ಶನ’ ಎಂದು ದೂರಿದರು.

ನಿರ್ಬಂಧ ಪಾಲಿಸಲು ವಿರೋಧಿಸಿದ ಫಾಹೀಮಾ ಅವರನ್ನು ಹೊರಹಾಕಲಾಗಿದೆ. ಈ ನಿರ್ಬಂಧಕ್ಕೆ ಅನೇಕರ ವಿರೋಧವಿದೆ. ಶಿಸ್ತುಕ್ರಮದ ಭೀತಿಯಿಂದ ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಾಚಾರ್ಯರಾದ ದೇವಿಪ್ರಿಯಾ ಅವರು, ‘ಪ್ರಕರಣ ಕೋರ್ಟ್‌ನಲ್ಲಿದೆ. ಈ ಬಗ್ಗೆ ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.