ADVERTISEMENT

₹480 ಕೋಟಿ ಮೌಲ್ಯದ ಮಾದಕವಸ್ತು ಸಾಗಿಸುತ್ತಿದ್ದ ಪಾಕ್‌ ದೋಣಿ ಜಪ್ತಿ: 6 ಮಂದಿ ಬಂಧನ

ಪಿಟಿಐ
Published 13 ಮಾರ್ಚ್ 2024, 0:21 IST
Last Updated 13 ಮಾರ್ಚ್ 2024, 0:21 IST
-
-   

ನವದೆಹಲಿ/ಅಹಮದಾಬಾದ್‌: ವಿವಿಧ ಕೇಂದ್ರೀಯ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ₹480 ಕೋಟಿ ಮೌಲ್ಯದ ಮಾದಕವಸ್ತುವನ್ನು ಪಾಕಿಸ್ತಾನದಿಂದ ಸಾಗಿಸುತ್ತಿದ್ದ ದೋಣಿಯನ್ನು ಪೋರಬಂದರ್‌ ಬಳಿ ಅರಬ್ಬಿಸಮುದ್ರದಲ್ಲಿ ಜಪ್ತಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.

ಮಾರ್ಚ್‌ 11ರ ರಾತ್ರಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ದೋಣಿಯಲ್ಲಿದ್ದ ಆರು ಜನರನ್ನು ಬಂಧಿಸಲಾಗಿದೆ ಎಂದೂ ತಿಳಿಸಿದೆ.

ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

ADVERTISEMENT

‘ಪೋರಬಂದರ್‌ನಿಂದ 350 ಕಿ.ಮೀ. ದೂರದಲ್ಲಿ, ಹಡಗುಗಳು ಹಾಗೂ ಡಾರ್ನಿಯರ್ ವಿಮಾನ ಬಳಸಿ ನಡೆಸಿದ ಈ ಜಂಟಿ ಕಾರ್ಯಾಚರಣೆಯು ಕರಾವಳಿ ರಕ್ಷಣಾ ಪಡೆ, ಎನ್‌ಸಿಬಿ ಹಾಗೂ ಗುಜರಾತ್‌ನ ಎಟಿಎಸ್‌ ನಡುವಿನ ಅತ್ಯುನ್ನತ ಸಮನ್ವಯಕ್ಕೆ ಸಾಕ್ಷಿಯಾಗಿತ್ತು’ ಎಂದೂ ಸಚಿವಾಲಯ ತಿಳಿಸಿದೆ.

‘ಮಾದಕವಸ್ತುವಿದ್ದ ದೋಣಿ ಸಾಗುತ್ತಿದ್ದ ಸ್ಥಳವನ್ನು ಡಾರ್ನಿಯರ್ ವಿಮಾನ ಗುರುತಿಸಿ, ಮಾಹಿತಿ ರವಾನಿಸಿದ ನಂತರ, ಎನ್‌ಸಿಬಿ ಹಾಗೂ ಎಟಿಎಸ್‌ ಸಿಬ್ಬಂದಿ ಒಳಗೊಂಡ ತಂಡಗಳು ದೋಣಿಯನ್ನು ಪತ್ತೆ ಮಾಡಿದವು. ಸವಾಲಿನಿಂದ ಕೂಡಿದ್ದ ಈ ಕಾರ್ಯಾಚರಣೆಯಲ್ಲಿ, ಕರಾವಳಿ ರಕ್ಷಣಾ ಪಡೆ ಹಡಗುಗಳು ದೋಣಿಯನ್ನು ತಡೆಯುವಲ್ಲಿ ಯಶಸ್ವಿಯಾದವು’.

‘ನೌಕೆಯಲ್ಲಿದ್ದ ತಂಡವೊಂದು ಆ ಕೂಡಲೇ ದೋಣಿಯಲ್ಲಿ ಇಳಿದು, ತನಿಖೆ ನಡೆಸಿದಾಗ, ದೋಣಿಯು ಪಾಕಿಸ್ತಾನಕ್ಕೆ ಸೇರಿದ್ದು ಎಂಬುದು ಖಚಿತವಾಯಿತು’ ಎಂದು ಸಚಿವಾಲಯ ತಿಳಿಸಿದೆ.

‘80 ಕೆ.ಜಿಯಷ್ಟು ತೂಕದ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ₹480 ಕೋಟಿ ಎಂದು ಅಂದಾಜಿಸಲಾಗಿದೆ’ ಎಂದು ಎಟಿಎಸ್‌ ಎಸ್ಪಿ ಸುನಿಲ್‌ ಜೋಶಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.