ನಾಗ್ಪುರ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ, ಸಂಪೂರ್ಣ ಸ್ವದೇಶಿ ನಿರ್ಮಿತ ‘ಆಕಾಶ್‌ತೀರ್’ ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ಇತರೆ ದೇಶಗಳು ಆಸಕ್ತಿ ವಹಿಸಲಿವೆ ಎಂದು ಭಾರತದ ಅತ್ಯುನ್ನತ ರಕ್ಷಣಾ ವಿಜ್ಞಾನಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತವು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ‘ಆಕಾಶ್‌ತೀರ್’ ವಾಯುರಕ್ಷಣಾ ಸ್ವಯಂಚಾಲಿತ ಹಾಗೂ ರಿಪೋರ್ಟಿಂಗ್ ವ್ಯವಸ್ಥೆಯು ಅಗೋಚರ ಶಕ್ತಿಯಾಗಿ ಹೊರಹೊಮ್ಮಿತ್ತು.
‘ನಿಜವಾಗಿಯೂ ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಬೇರೆ ದೇಶಗಳು ಆದಷ್ಟು ಬೇಗ ಇದನ್ನು ಖರೀದಿಸಲು ಮುಂದೆ ಬರಲಿವೆ’ ಎಂದು ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಸಮೀರ್ ವಿ.ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.
‘ಇದು ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರ’ದ ಹೆಜ್ಜೆಯಾಗಿದೆ. ಈಗಾಗಲೇ ನಾವು ಗಣನೀಯ ಪ್ರಗತಿ ಸಾಧಿಸಿದ್ದು, ಸಂಪೂರ್ಣವಾಗಿ ಸ್ವಾವಲಂಬಿಯಾಗಲು ಇನ್ನಷ್ಟು ಕೆಲಸವಾಗಬೇಕಿದೆ’ ಎಂದು ಹೇಳಿದರು.
‘ಭಾರತೀಯ ರಕ್ಷಣಾ ತಂತ್ರಜ್ಞಾನದ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ಅವರು, ಡ್ರೋನ್, ಕ್ಷಿಪಣಿ ಹಾಗೂ ರಾಕೆಟ್ ಯೋಜನೆಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ’ ಎಂದರು.
ಏನಿದರ ವಿಶೇಷತೆ: ‘ಆಕಾಶ್‌ತೀರ್’ ವಾಯುರಕ್ಷಣಾ ವ್ಯವಸ್ಥೆಯಲ್ಲಿ ಬಹುವಿಧದ ರೇಡಾರ್ ವ್ಯವಸ್ಥೆಯು ಸಂಯೋಜನೆಗೊಂಡಿದ್ದು, ಶತ್ರುರಾಷ್ಟ್ರಗಳ ವಿಮಾನ, ಡ್ರೋನ್ ಹಾಗೂ ಕ್ಷಿಪಣಿಗಳನ್ನು ನಿಖರವಾಗಿ ಪತ್ತೆಹಚ್ಚಿ, ಪ್ರತಿದಾಳಿ ನಡೆಸಲು ನೆರವಾಗುತ್ತದೆ. ಸೆನ್ಸರ್ ಹಾಗೂ ಸಂವಹನ ತಂತ್ರಜ್ಞಾನವು ಏಕೀಕೃತಗೊಂಡಿದ್ದು, ಮೊಬೈಲ್ ಅಥವಾ ವಾಹನ ಆಧರಿತ ಚೌಕಟ್ಟಿನಲ್ಲಿ ಕೆಲಸ ಮಾಡಲು ಅನುಕೂಲಕರವಾಗಿದ್ದು, ಶತ್ರುರಾಷ್ಟ್ರಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಅತ್ಯಂತ ಸಹಕಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.