ADVERTISEMENT

ಸೋಂಕು ಪ್ರಕರಣ ಇಳಿಕೆಗೆ ಏನು ಕಾರಣ?

ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚುತ್ತಲೇ ಇದೆ: ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 19:56 IST
Last Updated 13 ಅಕ್ಟೋಬರ್ 2020, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""
""
""

ನವದೆಹಲಿ: ‘ದೇಶದಲ್ಲಿ ಕೋವಿಡ್‌ ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

‘ಕೋವಿಡ್ ಪರೀಕ್ಷೆಗಳ ಸ್ವರೂಪದಲ್ಲಿ ಬದಲಾವಣೆ ಆಗಿದೆ. ಹೀಗಾಗಿಯೇ ಪರೀಕ್ಷೆಗಳ ಸಂಖ್ಯೆ ಇಳಿಕೆ ಆಗದಿದ್ದರೂ, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ’ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌ ಪರೀಕ್ಷೆಗಳ ಸಂಖ್ಯೆಯನ್ನು ಇಳಿಸಿಲ್ಲ ಎಂದು ಸರ್ಕಾರವು ಹೇಳಿದೆ. ‘ಅಕ್ಟೋಬರ್ ಮೊದಲ ವಾರದಿಂದ ದೇಶದಾದ್ಯಂತ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಮಾಹಿತಿ ನೀಡಿದೆ. ಆದರೆ, ಕೋವಿಡ್‌ ಪರೀಕ್ಷೆಗಳ ಸ್ವರೂಪದ ಬಗ್ಗೆ ಸರ್ಕಾರವು ಮಾಹಿತಿ ನೀಡಿಲ್ಲ.

ADVERTISEMENT

‘ದೇಶದಲ್ಲಿ ಎರಡು ತಿಂಗಳ ಮೊದಲು ನಡೆಸುತ್ತಿದ್ದ ಕೋವಿಡ್‌ ಪರೀಕ್ಷೆಗಳೆಲ್ಲವೂ ಆರ್‌ಟಿ‌–ಪಿಸಿಆರ್‌ ಪರೀಕ್ಷೆಗಳಾಗಿದ್ದವು. ಆರ್‌ಟಿ–ಪಿಸಿಆರ್ ಪರೀಕ್ಷೆಗಳ ನಿಖರತೆ ಹೆಚ್ಚು. ಅದರೆ, ಈಚಿನ ದಿನಗಳಲ್ಲಿ ರ‍್ಯಾಪಿಡ್‌ ಪ್ರತಿಕಾಯ (ಆ್ಯಂಟಿಜೆನ್‌) ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲಾಗುತ್ತಿದೆ. ಪ್ರತಿಕಾಯ ಪರೀಕ್ಷೆಗಳ ಫಲಿತಾಂಶದ ನಿಖರತೆ ಕಡಿಮೆ. ಪ್ರತಿಕಾಯ ಪರೀಕ್ಷೆಗಳನ್ನು ಒಟ್ಟು ಪರೀಕ್ಷೆಗಳ ಸಂಖ್ಯೆಯ ಜತೆ ಸೇರಿಸಲಾಗುತ್ತಿದೆ. ಹೀಗಾಗಿ ಒಟ್ಟು ಪರೀಕ್ಷೆಗಳ ಸಂಖ್ಯೆ ಕಡಿಮೆ ಆಗಿಲ್ಲ. ಆದರೆ ಆರ್‌ಟಿ–ಪಿಸಿಆರ್‌ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಪ್ರತಿಕಾಯ ಪರೀಕ್ಷೆಗಳಲ್ಲಿ ಸೋಂಕಿತರು ಪತ್ತೆಯಾಗುವ ಪ್ರಮಾಣ ಕಡಿಮೆ ಇದೆ. ಹೀಗಾಗಿಯೇ ದೇಶದಲ್ಲಿ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ’ಎಂದು ಥೈರೋಕೇರ್ ಲ್ಯಾಬೊರೇಟರಿಸ್‌ನ ಸಂಸ್ಥಾಪಕ ಡಾ. ವೇಲುಮಣಿ ಟ್ವೀಟ್ ಮಾಡಿದ್ದಾರೆ. ಆರ್‌ಟಿ–ಪಿಸಿಆರ್ ಮತ್ತು ರ‍್ಯಾಪಿಡ್ ಪ್ರತಿಕಾಯ‌ ಪರೀಕ್ಷೆಗಳನ್ನು ನಡೆಸಲು ಈ ಸಂಸ್ಥೆ ಪರವಾನಗಿ ಪಡೆದಿದೆ.

‘ಆರ್‌ಟಿ–ಪಿಸಿಆರ್‌ ಪರೀಕ್ಷೆಗಳಲ್ಲಿಸೋಂಕಿತರ ಪತ್ತೆ ಪ್ರಮಾಣ ಶೇ 20ರಷ್ಟು ಇತ್ತು. ರ‍್ಯಾಪಿಡ್ ಪ್ರತಿಕಾಯ ಪರೀಕ್ಷೆಗಳಲ್ಲಿ ಸೋಂಕಿತರ ಪತ್ತೆ ಪ್ರಮಾಣ ಶೇ 6–7ರಷ್ಟು ಮಾತ್ರ ಇದೆ’ ಎಂದು ವೇಲುಮಣಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.