ADVERTISEMENT

ಭಾರತ: ನಾಲ್ಕು ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಪಿಟಿಐ
Published 21 ಜೂನ್ 2020, 19:37 IST
Last Updated 21 ಜೂನ್ 2020, 19:37 IST
ಮುಂಬೈಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾನುವಾರ ಆರೋಗ್ಯ ಕಾರ್ಯಕರ್ತರು ಕಾರ್ಮಿಕದ ದೇಹದ ತಾಪಮಾನವನ್ನು ಪರೀಕ್ಷಿಸಿದರು  –ಪಿಟಿಐ ಚಿತ್ರ
ಮುಂಬೈಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾನುವಾರ ಆರೋಗ್ಯ ಕಾರ್ಯಕರ್ತರು ಕಾರ್ಮಿಕದ ದೇಹದ ತಾಪಮಾನವನ್ನು ಪರೀಕ್ಷಿಸಿದರು  –ಪಿಟಿಐ ಚಿತ್ರ   

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಭಾನುವಾರ 4 ಲಕ್ಷ ದಾಟಿದೆ. ಮೂರು ಲಕ್ಷದ ಗಡಿದಾಟಿದ ಎಂಟೇ ದಿನದಲ್ಲಿ ಇನ್ನೂ ಒಂದು ಲಕ್ಷ ಸೋಂಕಿತರು ಸೇರ್ಪಡೆಯಾಗಿದ್ದಾರೆ.

ಶನಿವಾರ ಬೆಳಿಗ್ಗೆ 8ರಿಂದ ಭಾನುವಾರ ಬೆಳಿಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ 15,413 ಮಂದಿ ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ. ಇದು ಒಂದೇ ದಿನದ ಗರಿಷ್ಠ ಪ್ರಮಾಣವಾಗಿದೆ.

ಸೋಂಕಿತರ ಸಂಖ್ಯೆಯು 100ರಿಂದ 1ಲಕ್ಷಕ್ಕೆ ತಲುಪಲು 64 ದಿನಗಳು ತಗುಲಿದ್ದವು. ಆನಂತರದ 15 ದಿನಗಳಲ್ಲಿ ಈ ಸಂಖ್ಯೆ 2 ಲಕ್ಷಕ್ಕೆ ತಲುಪಿತ್ತು. ಅದಾಗಿ ಹತ್ತೇ ದಿನಗಳಲ್ಲಿ 3 ಲಕ್ಷ ಹಾಗೂ ಎಂಟು ದಿನಗಳಲ್ಲಿ 4,10,461ಕ್ಕೆ ತಲುಪಿದೆ.

ADVERTISEMENT

ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಈಚೆಗೆ ಏರಿಕೆಯಾಗುತ್ತಿದೆ. ಈವರೆಗೆ 2,27,755 ಮಂದಿ ಗುಣಮುಖರಾಗಿದ್ದಾರೆ (ಶೇ 55.49) ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ‘ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 722ಕ್ಕೆ ಹಾಗೂ ಖಾಸಗಿ ಪ್ರಯೋಗಾಲಯಗಳ ಸಂಖ್ಯಯನ್ನು 259ಕ್ಕೆ ಹೆಚ್ಚಿಸಲಾಗಿದೆ. 24 ಗಂಟೆಗಳಲ್ಲಿ 1,90,730 ಮಂದಿಯ ಗಂಟಲುದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟಾರೆ 68.07 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್‌–19ರಿಂದಾಗಿ ಈವರೆಗೆ ಒಟ್ಟಾರೆ 13,254 ಮಂದಿ ಪ್ರಾಣ ಬಿಟ್ಟಿದ್ದು, ಅವರಲ್ಲಿ 5,984 ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ದೆಹಲಿ (2,112), ಗುಜರಾತ್‌ (1,638), ತಮಿಳುನಾಡು (704), ಪಶ್ಚಿಮ ಬಂಗಾಳ (540), ಉತ್ತರಪ್ರದೇಶ (507) ಹಾಗೂ ಮಧ್ಯಪ್ರದೇಶ (501) ಇವೆ.

‘ಕೋವಿಡ್‌ಗೆ ಬಲಿಯಾದವರಲ್ಲಿ ಶೇ 70ಕ್ಕೂ ಹೆಚ್ಚು ಮಂದಿಗೆ ಇತರ ಕಾಯಿಲೆಗಳೂ ಇದ್ದವು’ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.