ADVERTISEMENT

ಕುಂಠಿತ ಆರ್ಥಿಕ ಬೆಳವಣಿಗೆ: ದೇಶದ ವಿದ್ಯುತ್ ಬೇಡಿಕೆ ಭಾರಿ ಕುಸಿತ

ಕಲ್ಲಿದ್ದಲು ಆಮದು–ದೆಶೀಯ ಉತ್ಪಾದನೆಯೂ ಕುಸಿತ

ರಾಯಿಟರ್ಸ್
Published 12 ನವೆಂಬರ್ 2019, 21:10 IST
Last Updated 12 ನವೆಂಬರ್ 2019, 21:10 IST
ಮಹಾನದಿ ಕಲ್ಲಿದ್ದಲು ಗಣಿ –ರಾಯಿಟರ್ಸ್‌ ಚಿತ್ರ
ಮಹಾನದಿ ಕಲ್ಲಿದ್ದಲು ಗಣಿ –ರಾಯಿಟರ್ಸ್‌ ಚಿತ್ರ   

ನವದೆಹಲಿ/ಲಾನ್ಸೆಸ್ಟನ್ (ಆಸ್ಟ್ರೇಲಿಯಾ):‘ಭಾರತದ ಅರ್ಥ ವ್ಯವಸ್ಥೆಯ ಪ್ರಗತಿ ದರ ಇಳಿಕೆ ಆಗಿರುವುದರಿಂದ, ಕೈಗಾರಿಕಾ ವಲಯದ ವಿದ್ಯುತ್‌ ಬಳಕೆ ಕುಸಿದಿದೆ. 2018ರ ಅಕ್ಟೋಬರ್‌ಗೆ ಹೋಲಿಸಿದರೆ, 2019ರ ಅಕ್ಟೋಬರ್‌ನಲ್ಲಿ ವಿದ್ಯುತ್‌ನ ಬೇಡಿಕೆ ಶೇ 13.2ರಷ್ಟು ಕುಸಿದಿದೆ’ ಎಂದು ರಿಫೈನೈಟಿವ್ ಸಂಶೋಧನಾ ಸಂಸ್ಥೆ ಹೇಳಿದೆ.

‘ಇದೇ ವೇಳೆ, ದೇಶದ ಕಲ್ಲಿದ್ದಲು ಆಮದು ಮತ್ತು ದೇಶೀಯ ಕಲ್ಲಿದ್ದಲು ಉತ್ಪಾದನೆಯೂ ಕುಸಿದಿದೆ. ವಿದ್ಯುತ್‌ ಬೇಡಿಕೆ ಕುಸಿತದ ಪ್ರಮಾಣ ಹಾಗೂ ಕಲ್ಲಿದ್ದಲು ಆಮದು ಮತ್ತು ಉತ್ಪಾದನೆ ಕುಸಿತದ ಪ್ರಮಾಣವು ಸರಿಸುಮಾರು ಒಂದೇ ಮಟ್ಟದಲ್ಲಿದೆ. ಹೀಗಾಗಿ ದೇಶದ ವಿದ್ಯುತ್ ಬೇಡಿಕೆ ಕುಸಿತಕ್ಕೂ, ಕಲ್ಲಿದ್ದಲು ಆಮದು ಮತ್ತು ಉತ್ಪಾದನೆಗೂ ಸಂಬಂಧವಿದೆ’ ಎಂದು ರಿಫೈನೈಟಿವ್ ಸಂಸ್ಥೆಯ ತನ್ನ ವರದಿಯಲ್ಲಿ ವಿವರಿಸಿದೆ.

‘2019–20 ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳು (ಏಪ್ರಿಲ್‌ನಿಂದ ಜುಲೈ) ವಿದ್ಯುತ್ ಬೇಡಿಕೆ ಏರುಗತಿಯಲ್ಲಿ ಇತ್ತು. 2018–19ನೇ ಸಾಲಿನ ಮೊದಲ ನಾಲ್ಕು ತಿಂಗಳುಗಳಿಗೆ ಹೋಲಿಸಿದರೆ, 2019ರ ಈ ಅವಧಿಯಲ್ಲಿ ದೇಶದಾದ್ಯಂತ ವಿದ್ಯುತ್‌ ಬಳಕೆ ಅಧಿಕವಾಗಿತ್ತು. ಆದರೆ, ಬೇಡಿಕೆಯುಆಗಸ್ಟ್‌ನಿಂದ ಕುಸಿತದ ಹಾದಿ ಹಿಡಿದಿದೆ. ಸೆಪ್ಟೆಂಬರ್‌ನಲ್ಲೂ ವಿದ್ಯುತ್‌ಗೆ ಬೇಡಿಕೆ ಕುಸಿದಿತ್ತು. ಅಕ್ಟೋಬರ್‌ನಲ್ಲಿ ಕುಸಿತದ ಪ್ರಮಾಣ ಬಾರಿ ವೇಗ ಪಡೆದಿದೆ’ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ಆಗಸ್ಟ್‌–ಅಕ್ಟೋಬರ್ ಅವಧಿಯಲ್ಲಿ ಭಾರತದ ಬಹುತೇಕ ಎಲ್ಲಾ ಕ್ಷೇತ್ರಗಳ ಪ್ರಗತಿ ಕುಸಿದಿದೆ. ಕೈಗಾರಿಕಾ ವಲಯ, ಸೇವಾ ವಲಯಗಳ ಬೇಡಿಕೆ ಇಳಿದಿದೆ.ಭಾರತದ ತಯಾರಿಕಾ ವಲಯದ ಬೆಳವಣಿಗೆ ನಕಾರಾತ್ಮಕವಾಗಿದೆ. ಹಲವು ಸಣ್ಣಪುಟ್ಟ ಕೈಗಾರಿಕೆಗಳು ಬಾಗಿಲು ಹಾಕಿವೆ. ಬಹುತೇಕ ಕೈಗಾರಿಕೆಗಳು ತಯಾರಿಕೆ ಪ್ರಮಾಣವನ್ನು ಕಡಿಮೆ ಮಾಡಿವೆ. ಇದೇ ವೇಳೆಯಲ್ಲಿ ದೇಶದಲ್ಲಿ ಎಲ್ಲಾ ಸ್ವರೂಪದ ವಾಹನಗಳ ಮಾರಾಟವೂ ಭಾರಿ ಪ್ರಮಾಣದ ಕುಸಿತ ಕಂಡಿದೆ. ಇವೆಲ್ಲವೂ ಭಾರತದ ಆರ್ಥಿಕತೆಯ ಪ್ರಗತಿ ಇಳಿಮುಖವಾಗಿರುವುದನ್ನು ತೋರಿಸುತ್ತದೆ. ದೇಶದ ವಿದ್ಯುತ್ ಬೇಡಿಕೆ ಕುಸಿತಕ್ಕೂ, ಆರ್ಥಿಕ ಕುಸಿತಕ್ಕೂ ಸಂಬಂಧವಿದೆ ಎಂದುವರದಿಯಲ್ಲಿ ವಿಶ್ಲೇಷಿಸಲಾಗಿದೆ.

‘ಈ ಅವಧಿಯಲ್ಲಿ ದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್‌ನ ಉತ್ಪಾದನೆ ಹೆಚ್ಚಾಗಿದೆ. ಕಲ್ಲಿದ್ದಲು ಆಮದು–ಉತ್ಪಾದನೆ ಕುಸಿತಕ್ಕೆ ಇದೂ ಒಂದು ಕಾರಣ. ಆದರೆ ಇದರ ಪ್ರಭಾವ ಕಡಿಮೆ’ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕುಸಿದ ಕೋಲ್ ಇಂಡಿಯಾ ಉತ್ಪಾದನೆ
ವಿಶ್ವದ ಅತ್ಯಂತ ದೊಡ್ಡ ಕಲ್ಲಿದ್ದಲು ಉತ್ಪಾದಕ ಕಂಪನಿ ‘ಕೋಲ್‌ ಇಂಡಿಯಾ ಲಿಮಿಟೆಡ್‌’ನ ಉತ್ಪಾದನೆ ಕುಸಿದಿದೆ.2019–20ನೇ ಸಾಲಿನ ಮೊದಲ ಏಳು ತಿಂಗಳಲ್ಲಿ (ಏಪ್ರಿಲ್‌–ಅಕ್ಟೋಬರ್‌) ಕಂಪನಿಯು 28.03 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದಿಸಿದೆ. 2018–19ನೇ ಸಾಲಿನ ಇದೇ ಅವಧಿಗೆ ಹೋಲಿಸಿದರೆ, 2019–20ರ ಉತ್ಪಾದನೆಯು ಶೇ 8.5ರಷ್ಟು ಇಳಿಕೆಯಾಗಿದೆ.

ಸಾಮಾನ್ಯವಾಗಿ ಕಲ್ಲಿದ್ದಲು ಆಮದು ಕುಸಿದರೆ, ದೇಶೀಯ ಉತ್ಪಾದನೆ ಅಧಿಕವಾಗಿರುತ್ತದೆ. ಆದರೆ ಈ ವರ್ಷ ದೇಶೀಯ ಉತ್ಪಾದನೆಯೂ ಕುಸಿದಿದೆ. ಹೀಗಾಗಿ ದೇಶದ ವಿದ್ಯುತ್ ಬೇಡಿಕೆ ಕುಸಿದಿರುವುದೇ, ಕಲ್ಲಿದ್ದಲು ಆಮದು ಮತ್ತು ಉತ್ಪಾದನೆ ಕುಸಿತಕ್ಕೆ ಕಾರಣ ಎಂಬುದು ನಿರ್ವಿವಾದ ಎಂದು ರಿಫೈನೈಟಿವ್ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.