ADVERTISEMENT

ಕುವೈತ್‌ಗೆ ಪ್ರವೇಶ: ಶಶಿ ತರೂರ್‌ ಟ್ವೀಟ್‌ಗೆ ರಾಯಭಾರ ಕಚೇರಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 16:14 IST
Last Updated 18 ಫೆಬ್ರುವರಿ 2022, 16:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಯಾರೊಬ್ಬರಿಗೂ ದೇಶವನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕುವೈತ್‌ನ 22 ಸಂಸದರು ಒತ್ತಾಯಿಸಿದ್ದಾರೆ’ ಎಂದು ಅಲ್ಲಿನ ವಕೀಲರೊಬ್ಬರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕಾಂಗ್ರೆಸ್‌ನ ಸಂಸದ ಶಶಿ ತರೂರ್‌ ಮರುಟ್ವೀಟ್‌ ಮಾಡಿದ್ದಾರೆ. ಇದರ ಹಿಂದೆಯೇ, ಕುವೈತ್‌ ವಕೀಲರ ಟ್ವೀಟ್‌ಗೆ ಅಲ್ಲಿನ ಭಾರತದ ರಾಯಭಾರ ಕಚೇರಿಯು ಬೇಸರ ವ್ಯಕ್ತಪಡಿಸಿದೆ.

ವೆಸ್ಟ್‌ ಏಷಿಯನ್‌ನ ವಕೀಲ ಮೆಜ್‌ಬೆಲ್‌ ಅಲ್‌ ಶರಿಕಾ ಅವರು ಟ್ವೀಟ್‌ ಮಾಡಿದ್ದಾರೆ. ಈತ ಪಾಕಿಸ್ತಾನದ ಏಜೆಂಟ್ ಆಗಿದ್ದಾರೆ ಎಂದು ಕುವೈತ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿಯು ಆರೋಪಿಸಿದೆ.

ಕುವೈತ್‌ನ ಸಂಸತ್‌ನ 22 ಸದಸ್ಯರು ಸಹಿ ಹಾಕಿದ್ದಾರೆ ಎನ್ನಲಾದ ತಿರುಚಲಾದ ಪತ್ರವನ್ನುಶರಿಕಾ ಟ್ವೀಟ್‌ ಮಾಡಿದ್ದಾರೆ. ‘ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಯಾವುದೇ ಸದಸ್ಯರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಬಾರದು ಎಂದುಈ ಎಲ್ಲ ಸದಸ್ಯರು ಆಗ್ರಹಿಸಿದ್ದಾರೆ’ ಎಂದು ಬರೆದುಕೊಂಡಿದ್ದು, ಕರ್ನಾಟಕದಲ್ಲಿ ತಲೆದೋರಿರುವ ಹಿಜಾಬ್‌ ವಿವಾದವನ್ನೂ ಉಲ್ಲೇಖಿಸಿದ್ದರು.

ADVERTISEMENT

ಸಂಸದ ಶಶಿ ತರೂರ್‌ ಅವರು ಇದೇ ಟ್ವೀಟ್‌ ಅನ್ನು ಮರು ಟ್ವೀಟ್ ಮಾಡಿದ್ದರು. ‘ಭಾರತ ಸಂಸತ್ತಿನ ಗೌರವಾನ್ವಿತ ಸದಸ್ಯರೊಬ್ಬರು, ಪಾಕಿಸ್ತಾನದ ಏಜೆಂಟ್‌ನ ದೇಶ ವಿರೋಧಿ ಟ್ವೀಟ್‌ ಅನ್ನು ಮರುಟ್ವೀಟ್‌ ಮಾಡಿರುವುದು ದುರದೃಷ್ಟಕರ’ ಎಂದು ಕುವೈತ್‌ನ ಭಾರತದ ರಾಯಭಾರ ಕಚೇರಿ ಟ್ವೀಟ್ ಮೂಲಕವೇ ಇದಕ್ಕೆ ಪ್ರತಿಕ್ರಿಯಿಸಿತ್ತು. ಇಂಥ ಬೆಳವಣಿಗೆಗಳಿಗೆ ಉತ್ತೇಜನ ನೀಡಬಾರದು ಎಂದು ಕೋರಿತ್ತು.

ಮೆಜ್‌ಬೆಲ್‌ ಅಲ್ ಶರಿಕಾ ಅವರು ಕುವೈತ್ ವಕೀಲರ ಸಂಘದಲ್ಲಿ ಮಾನವ ಹಕ್ಕುಗಳ ಕೇಂದ್ರದ ನಿರ್ದೇಶಕರಾಗಿದ್ದಾರೆ. ಭಾರತದ ವಿರುದ್ಧವಾಗಿ ಪಾಕಿಸ್ತಾನವು ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿಯೂ ಈತ ಭಾಗವಹಿಸಿದ್ದ ಎಂದು ರಾಯಭಾರ ಕಚೇರಿಯು ತಿಳಿಸಿದೆ.ಕರ್ನಾಟಕದ ಶಿಕ್ಷಣ ಸಂಸ್ಥೆಯಲ್ಲಿ ಮಹಿಳೆಯೊಬ್ಬರಿಂದ ಬಲವಂತವಾಗಿ ಹಿಜಾಬ್ ತೆಗೆಸಲಾಗುತ್ತಿದೆ ಎಂಬ ವಿಡಿಯೊ ಅನ್ನು ಶರಿಕಾ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.