ADVERTISEMENT

ಹೈದರಾಬಾದ್‌ನ ಸಂಶೋಧಕರಿಂದ ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿ

ಪಿಟಿಐ
Published 15 ಆಗಸ್ಟ್ 2022, 12:15 IST
Last Updated 15 ಆಗಸ್ಟ್ 2022, 12:15 IST
   

ಹೈದರಾಬಾದ್‌: ನಗರದ ವಿಜ್ಞಾನಿಗಳು ಹಾಗೂ ಸಂಶೋಧಕರುತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿಪಡಿಸಿ ಅದನ್ನು ಮೊಲವೊಂದರ ಕಣ್ಣಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಮಟ್ಟಿಗೆ ಇದು ಮೊದಲ ಪ್ರಯೋಗವಾಗಿದೆ.

‘ಎಲ್‌.ವಿ.ಪ್ರಸಾದ್‌ ನೇತ್ರ ಸಂಸ್ಥೆ (ಎಲ್‌ವಿಪಿಇಐ), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ–ಹೈದರಾಬಾದ್‌ (ಐಐಟಿಎಚ್‌) ಹಾಗೂ ಸೆಂಟರ್‌ ಫಾರ್‌ ಸೆಲ್ಯೂಲರ್‌ ಆ್ಯಂಡ್‌ ಮೊಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ) ಸಂಸ್ಥೆಯ ಸಂಶೋಧಕರು ವ್ಯಕ್ತಿಯೊಬ್ಬರು ದಾನ ಮಾಡಿದ್ದ ಕಾರ್ನಿಯಲ್‌ ಅಂಗಾಂಶದಿಂದ ಇದನ್ನುಅಭಿವೃದ್ಧಿಪಡಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಇದು ಸಂಪೂರ್ಣವಾಗಿ ನೈಸರ್ಗಿಕ ಉತ್ಪನ್ನವಾಗಿದೆ. ಇದರಲ್ಲಿ ಯಾವುದೇ ಬಗೆಯ ಸಿಂಥೆಟಿಕ್‌ ಅಂಶಗಳನ್ನು ಸೇರ್ಪಡೆ ಮಾಡಿಲ್ಲ. ಇದು ಅತ್ಯಂತ ಸುರಕ್ಷಿತವಾಗಿದ್ದು, ರೋಗಿಗಳ ಬಳಕೆಗೆ ಮುಕ್ತವಾಗಿದೆ’ ಎಂದೂ ಹೇಳಲಾಗಿದೆ.

ADVERTISEMENT

‘ಈ ಕಾರ್ನಿಯಾ ತಯಾರಿಕೆಗಾಗಿ ‘ಬಯೊ ಇಂಕ್‌’ ಬಳಸಲಾಗಿದೆ. ಯುದ್ಧದ ಸಂದರ್ಭಗಳಲ್ಲಿ ಯೋಧರ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ದೃಷ್ಟಿಗೆ ಹಾನಿಯಾಗದಂತೆ ರಕ್ಷಿಸಲು ಹಾಗೂ ಕಣ್ಣಿಗೆ ಯಾವುದೇ ಬಗೆಯ ಸೋಂಕು ತಗುಲದಂತೆ ತಡೆಯಲು ಬಯೊ ಇಂಕ್‌ ಪ್ರಯೋಜನಕಾರಿ. ಕುಗ್ರಾಮದ ಜನರು ಕಣ್ಣಿನ ಆರೈಕೆ ಸೌಕರ್ಯದಿಂದ ವಂಚಿತರಾಗಿರುತ್ತಾರೆ. ಅಂತಹ ಸ್ಥಳಗಳಲ್ಲಿ‘ಬಯೊ ಇಂಕ್‌’ ಬಳಸಬಹುದು’ ಎಂದು ಕಾರ್ನಿಯಾ ಅಭಿವೃದ್ಧಿಪಡಿಸಿರುವ ಸಂಶೋಧಕರ ತಂಡದ ಸದಸ್ಯರಾದ ಡಾ.ಸಯಾನ್ ಬಸು ಹಾಗೂ ಡಾ.ವಿವೇಕ್‌ ಸಿಂಗ್‌ ತಿಳಿಸಿದ್ದಾರೆ.

‘ಕಾರ್ನಿಯಲ್‌ ಸ್ಕೇರಿಂಗ್‌’ ಮತ್ತು ‘ಕೆರಾಟೊಕೊನಸ್‌’ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನೂ ಗಮನದಲ್ಲಿಟ್ಟುಕೊಂಡುತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.