ನವದೆಹಲಿ: ರಷ್ಯಾದ ವಿಭಾಗದಲ್ಲಿ ಇತ್ತೀಚೆಗೆ ನಡೆದ ದುರಸ್ತಿಗಳ ನಂತರ ಕಕ್ಷೆಯ ಪ್ರಯೋಗಾಲಯದಲ್ಲಿನ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡಲು ನಾಸಾಗೆ ಅವಕಾಶ ನೀಡುವ ಸಲುವಾಗಿ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಆ್ಯಕ್ಸಿಯಂ -4 ಮಿಷನ್ ಅನ್ನು ಜೂನ್ 22ಕ್ಕೆ ನಡೆಸಲು ನಿರ್ಧರಿಸಲಾಗಿದೆ ಎಂದು ಆ್ಯಕ್ಸಿಯಂ ಸ್ಪೇಸ್ ಬುಧವಾರ ಪ್ರಕಟಿಸಿದೆ.
ಜೂನ್ 11ರಂದುಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್–9 ರಾಕೆಟ್ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ, ರಾಕೆಟ್‌ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಗಿತ್ತು. ಮೇ 29, ಜೂನ್ 8 ಮತ್ತು ಜೂನ್ 10ರಂದು ಸಹ ರಾಕೆಟ್ ಉಡಾವಣೆಗೆ ದಿನಾಂಕ ನಿಗದಿ ಮಾಡಿ ಆನಂತರ ಮುಂದೂಡಲಾಗಿತ್ತು. ಉಡಾವಣೆ ಹಲವು ಬಾರಿ ಮುಂದೂಡಿಕೆ ಬಳಿಕ ಜೂನ್ 19ಕ್ಕೆ ಮತ್ತೆ ಸಮಯ ನಿಗದಿ ಮಾಡಲಾಗಿತ್ತು. ಇದೀಗ, ಆ ಸಮಯವನ್ನು ರದ್ದು ಮಾಡಿ ಹೊಸ ದಿನಾಂಕ ನೀಡಲಾಗಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ್ ಕೇಂದ್ರಕ್ಕೆ ತಂತ್ರಜ್ಞರನ್ನು ಕಳುಹಿಸುವ ಖಾಸಗಿ ಬಾಹ್ಯಾಕಾಶ ಯಾನ ಆಕ್ಸಿಯಂ ಮಿಷನ್–4 ಪಯಣಕ್ಕೆ ನಾಸಾ, ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳು ಜೂನ್ 22 ದಿನಾಂಕವನ್ನು ಆಯ್ಕೆ ಮಾಡಿಕೊಂಡಿವೆ.
ಉದ್ದೇಶಿತ ಉಡಾವಣಾ ದಿನಾಂಕದಲ್ಲಿನ ಬದಲಾವಣೆಯು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜ್ವೆಜ್ಡಾ ಸರವಿಸ್ ಮಾಡ್ಯೂಲ್‌ನ ಇತ್ತೀಚಿನ ದುರಸ್ತಿ ಕಾರ್ಯಗಳ ನಂತರ ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ನಾಸಾಗೆ ಸಮಯ ಒದಗಿಸುತ್ತದೆ ಎಂದು ಅದು ಹೇಳಿದೆ.
ಆ್ಯಕ್ಸಿಯಂ-4 ವಾಣಿಜ್ಯ ಕಾರ್ಯಾಚರಣೆಯನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಿದ್ದಾರೆ. ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾಮ್‌ಸ್ಕಿ -ವಿಸ್ನಿವಿಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.