ADVERTISEMENT

ಕಳೆದ 7 ದಿನಗಳಲ್ಲಿ ಭಾರತದಲ್ಲಿ ಅಮೆರಿಕ, ಬ್ರೆಜಿಲ್‌ಗಿಂತ ಅಧಿಕ ಕೋವಿಡ್ ಪ್ರಕರಣ

ಕೇವಲ 24 ದಿನದಲ್ಲಿ 12 ಲಕ್ಷ ಹೊಸ ಪ್ರಕರಣಗಳು ದಾಖಲು

ಪಿಟಿಐ
Published 11 ಆಗಸ್ಟ್ 2020, 14:24 IST
Last Updated 11 ಆಗಸ್ಟ್ 2020, 14:24 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕಳೆದ ಏಳು ದಿನಗಳಲ್ಲಿ, ಭಾರತದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೋವಿಡ್‌–19 ಪ್ರಕರಣಗಳು ಅಮೆರಿಕ ಹಾಗೂ ಬ್ರೆಜಿಲ್‌ಗಿಂತ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿರುವ ದತ್ತಾಂಶಗಳಿಂದ ವಿಶ್ಲೇಷಿಸಲಾಗಿದೆ.

ಭಾರತವು,ಅತಿ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿರುವ ವಿಶ್ವದ ಮೂರನೇ ರಾಷ್ಟ್ರವಾಗಿದೆ. ವಿಶ್ವದಾದ್ಯಂತ ಆಗಸ್ಟ್‌ 4ರಿಂದ 10ರವರೆಗೆ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇ 23 ಪ್ರಕರಣ ಭಾರತದಲ್ಲಿದ್ದು, ಮರಣ ಪ್ರಮಾಣ ಶೇ 15ರಷ್ಟಿದೆ. ಆಗಸ್ಟ್‌ 10ರವರೆಗಿನ ಕಳೆದ ಏಳು ದಿನಗಳಲ್ಲಿ ಭಾರತದಲ್ಲಿ 4,11,379 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 6,251 ಜನರು ಮೃತಪಟ್ಟಿದ್ದಾರೆ.

ಇದೇ ಅವಧಿಯಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವ ಅಮೆರಿಕದಲ್ಲಿ 3,69,575 ಹೊಸ ಪ್ರಕರಣಗಳು ಹಾಗೂ ಸೋಂಕಿನಿಂದ 7,232 ಜನರು ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 3,04,535 ಪ್ರಕರಣಗಳು ದಾಖಲಾಗಿದ್ದು, 6,914 ಜನರು ಮೃತಪಟ್ಟಿದ್ದಾರೆ.

ADVERTISEMENT

ಕಳೆದ ನಾಲ್ಕು ದಿನಗಳಿಂದ ದೇಶದಲ್ಲಿ ನಿತ್ಯ 60 ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದವು. ಮಂಗಳವಾರ ಈ ಸಂಖ್ಯೆ 52,000ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ ಒಟ್ಟಾರೆ 22.68 ಲಕ್ಷ ಕೋವಿಡ್‌ ಪ್ರಕರಣಗಳು(ಮಂಗಳವಾರ ಬೆಳಗ್ಗೆ 8ರವರೆಗೆ) ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.