ADVERTISEMENT

ಸ್ವದೇಶಿ 4 ಜಿ ತಂತ್ರಜ್ಞಾನ | ಅಮೆರಿಕ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ: ಶಿಂದೆ

ಪಿಟಿಐ
Published 27 ಸೆಪ್ಟೆಂಬರ್ 2025, 11:21 IST
Last Updated 27 ಸೆಪ್ಟೆಂಬರ್ 2025, 11:21 IST
   

ಠಾಣೆ: ಭಾರತವು ಸ್ವದೇಶಿ 4 ಜಿ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ ಐದನೇ ದೇಶವಾಗಿದೆ. ಅಮೆರಿಕ ಕೂಡ ಮಾಡದ ಸಾಧನೆಯನ್ನು ಭಾರತವು ಸಾಧಿಸಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಹೇಳಿದ್ದಾರೆ.

ಒಡಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್ಎನ್ಎಲ್ ನಿರ್ಮಿಸಿರುವ ಸ್ವದೇಶಿ 4 ಜಿ ತಂತ್ರಜ್ಞಾನವನ್ನು ಶನಿವಾರ ಉದ್ಘಾಟಿಸಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರು ವರ್ಚುವಲ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚೀನಾ, ಮಯನ್ಮಾರ್‌, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ನಂತರ ಸ್ವದೇಶಿ 4 ಜಿ ತಂತ್ರಜ್ಞಾನ ಹೊಂದಿರುವ ಐದನೇ ದೇಶವಾಗಿ ಭಾರತವು ಹೊರಹೊಮ್ಮಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಸಹಾಯವಾಗಲಿದೆ. ಇದು ಕೇವಲ ಹೆಮ್ಮೆಯ ವಿಷಯವಲ್ಲ, ಟೆಲಿಕಾಂ ಕ್ಷೇತ್ರದ ಮಹತ್ವದ ಕ್ರಾಂತಿಯಾಗಿದೆ ಎಂದು ಏಕನಾಥ್‌ ಶಿಂದೆ ತಿಳಿಸಿದ್ದಾರೆ.

ADVERTISEMENT

ಭಾರತದ ಪಾಲಿಗೆ ಇದು ಐತಿಹಾಸಿಕ ದಿನವಾಗಿದೆ. 60–70 ವರ್ಷಗಳಿಂದ ಸಾಧ್ಯವಾಗದೇ ಇದ್ದದ್ದು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ 10 ವರ್ಷಗಳಲ್ಲೇ ಸಾಧ್ಯವಾಗಿದೆ. ಬಿಎಸ್ಎನ್ಎಲ್ 'ಡಿಜಿಟಲ್ ಇಂಡಿಯಾ'ದ ಕನಸನ್ನು ಸಾಧಿಸುವತ್ತ ಪ್ರಯಾಣವನ್ನು ಪ್ರಾರಂಭಿಸಿದೆ.18 ವರ್ಷಗಳ ನಂತರ ಬಿಎಸ್‌ಎನ್‌ಎಲ್‌ ಲಾಭ ಗಳಿಸಿದ್ದು, ಈ ವರ್ಷ ₹ 265 ಕೋಟಿ ಲಾಭ ಗಳಿಸಿದೆ ಎಂದು ಹೇಳಿದ್ದಾರೆ.

ಸ್ವದೇಶಿ ತಂತ್ರಜ್ಞಾನದ ಮೂಲಕ 2047ರ ವೇಳೆಗೆ ಭಾರತವು ವಿಶ್ವಗುರುವಾಗಲಿದೆ ಎಂದು ಏಕನಾಥ್‌ ಶಿಂದೆ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.