ನವದೆಹಲಿ(ಪಿಟಿಐ): ದೇಶೀಯವಾಗಿ ವಿನ್ಯಾಸಗೊಳಿಸಿ, ತಯಾರಿಸಲಾಗಿರುವ ‘ಮಾಡುಲರ್ ಸೇತುವೆ’ಯನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿದೆ ಎಂದು ಸೇನೆ ಮಂಗಳವಾರ ತಿಳಿಸಿದೆ.
ಇದು, ಸೇನೆಯ ಎಂಜಿನಿಯರಿಂಗ್ ವಿಭಾಗದ ಸಾಮರ್ಥ್ಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದೆ.
ಇಲ್ಲಿನ ಮಾಣಿಕ್‌ಶಾ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹಾಗೂ ಎಲ್ ಅಂಡ್ ಟಿ ಕಂಪನಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಯಾಂತ್ರಿಕವಾಗಿ ರೂಪಿಸಲಾಗಿರುವ 46 ಮೀಟರ್ ಉದ್ದದ ಈ ಸೇತುವೆಯನ್ನು ಸೇನೆಯ ವಾಹನಗಳಲ್ಲಿ ಸಾಗಿಸಬಹುದಾಗಿದ್ದು, ಕಾಲುವೆಗಳು, ಹಳ್ಳಗಳು ಸೇರಿದಂತೆ ವಿವಿಧ ಅಡಚಣೆಗಳನ್ನು ಸುಲಭವಾಗಿ ದಾಟಲು ಸಾಧ್ಯವಾಗಲಿದೆ. ಬಿಡಿಭಾಗಗಳನ್ನು ತ್ವರಿತವಾಗಿ ಜೋಡಿಸಿ, ಸೇತುವೆ ಸಿದ್ಧಪಡಿಸಬಹುದಾಗಿದೆ. ಅಷ್ಟೇ ವೇಗವಾಗಿ ಅವುಗಳನ್ನು ಬೇರ್ಪಡಿಸಿ ಸಾಗಣೆ ಮಾಡಲೂಬಹುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
‘ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ₹2,585 ಕೋಟಿ ವೆಚ್ಚದಲ್ಲಿ ಒಟ್ಟು 41 ಮಾಡುಲರ್ ಸೇತುವೆ ಸೆಟ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವುಗಳನ್ನು ಡಿಆರ್‌ಡಿಒ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಎಲ್ ಅಂಡ್ ಟಿ ಕಂಪನಿ ತಯಾರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.