ADVERTISEMENT

ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ

ಪಿಟಿಐ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
<div class="paragraphs"><p>ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನ ಹಾರಾಟದ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆಯಲು ಇಂಡಿಗೊ ಏರ್‌ಲೈನ್ಸ್‌ನ ಕಿಯೊಸ್ಕ್‌ ಮುಂದೆ ಸೇರಿದ್ದ ಪ್ರಯಾಣಿಕರು</p></div>

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನ ಹಾರಾಟದ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆಯಲು ಇಂಡಿಗೊ ಏರ್‌ಲೈನ್ಸ್‌ನ ಕಿಯೊಸ್ಕ್‌ ಮುಂದೆ ಸೇರಿದ್ದ ಪ್ರಯಾಣಿಕರು

   

–‍  ಪಿಟಿಐ ಚಿತ್ರ

ನವದೆಹಲಿ: ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ನಾಲ್ಕನೇ ದಿನವಾದ ಶುಕ್ರವಾರವೂ ತೀವ್ರ ವ್ಯತ್ಯಯವಾಗಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದರು.

ADVERTISEMENT

1,000 ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ದೆಹಲಿ, ಚೆನ್ನೈ
ನಿಂದ ಶುಕ್ರವಾರ ಸಂಸ್ಥೆಯ ಎಲ್ಲ ವಿಮಾನಗಳ ಹಾರಾಟ ರದ್ದುಗೊಳಿಸಲಾಯಿತು ಎಂದು ಇಂಡಿಗೊ ಸಂಸ್ಥೆಯು ತಿಳಿಸಿದೆ.

ನವದೆಹಲಿಯಿಂದ ಶುಕ್ರವಾರ ಮಧ್ಯರಾತ್ರಿ ವರೆಗೂ 235 ಮಾರ್ಗಗಳ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಚೆನ್ನೈ, ಗೋವಾದಿಂದ ತಲಾ 30 ವಿಮಾನಗಳು ಹಾರಾಟ ನಡೆಸಲಿಲ್ಲ. ಬೆಂಗಳೂರಿ ನಿಂದ ನವದೆಹಲಿ, ಮುಂಬೈಗೆ ನಿಗದಿಯಾಗಿದ್ದ ಸಂಸ್ಥೆಯ ಎಲ್ಲ ವಿಮಾನಗಳ ಹಾರಾಟವನ್ನೂ ದಿನದ ಮಟ್ಟಿಗೆ ತಡೆಹಿಡಿಯಲಾಯಿತು.

ದೇಶದ ಪ್ರಮುಖ ವಿಮಾನ ನಿಲ್ದಾಣಗಳಾದ ಮುಂಬೈ, ಕೋಲ್ಕತ್ತ, ಸೂರತ್‌, ಚೆನ್ನೈ, ಜೈಪುರ, ದೆಹಲಿ, ಇಂದೋರ್‌, ಭೋಪಾಲ್‌ ವಿಮಾನ ನಿಲ್ದಾಣ ಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಇಂಡಿಗೊ ವಿಮಾನಗಳು ಹಾರಾಟ ನಡೆಸಲಿಲ್ಲ. ಹೀಗಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಸೇರಿದ್ದರು.

ವಿಮಾನ ನಿಲ್ದಾಣದವರೆಗೂ ಬಂದು ವಿಮಾನ ಏರಲು ಆಗದ ಮತ್ತು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಪ್ರಯಾಣಿಕರು ಸಂಸ್ಥೆಯ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸುತ್ತಿದ್ದ ದೃಶ್ಯಗಳು ಹಲವು ನಿಲ್ದಾಣಗಳಲ್ಲಿ ಕಂಡುಬಂದವು. ಮಕ್ಕಳು ಹಾಗೂ ಹಿರಿಯರು ಸಿಕ್ಕ ಖಾಲಿ ಜಾಗದಲ್ಲೇ ವಿಶ್ರಾಂತಿಗೆ ಮೊರೆ ಹೋದರು.

ಮಾಹಿತಿ ಪಡೆಯಿರಿ:

|ವಿಮಾನಗಳ ಹಾರಾಟದ ಸ್ಥಿತಿಗತಿ ಕುರಿತಂತೆ ಮುಂಚಿತವಾಗಿ ಮಾಹಿತಿ ಪಡೆದುಕೊಂಡು ನಂತರವೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಇಂಡಿಗೊ ಏರ್‌ಲೈನ್ಸ್‌ ಪ್ರಯಾಣಿಕರಿಗೆ ಮನವಿ ಮಾಡಿದೆ.

ಮುಂದಿನ ವಾರದವರೆಗೂ ಜಮ್ಮು–ನವದೆಹಲಿ ನಡುವೆ ಸಂಚರಿಸುವ ರಾಜಧಾನಿ ಏಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಲು ಉತ್ತರ ರೈಲ್ವೆ ವಲಯವು ಕ್ರಮ ಕೈಗೊಂಡಿದೆ.

ಸಹಾಯವಾಣಿ ಸ್ಥಾಪನೆ:
ಸದ್ಯದ ನೈಜ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ, ಪರಿಣಾಮಕಾರಿಯಾದ ಸಮನ್ವಯದ ಜೊತೆಗೆ ತಕ್ಷಣದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯವು 24*7 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ತೆರೆದಿದೆ. ಸಂಪರ್ಕ ದೂರವಾಣಿ ಸಂಖ್ಯೆ:  011-24610843, 011-24693963, 096503-91859
ಫೆ. 10ರವರೆಗೆ ವಿಶ್ರಾಂತಿ ನೀತಿಗೆ ತಡೆ
‘ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವ ನಿಟ್ಟಿನಲ್ಲಿ ವಿಮಾನ ಕರ್ತವ್ಯದ ಸಮಯದ ನೀತಿ (ಎಫ್‌ಡಿಟಿಎಲ್‌) ಅನುಷ್ಠಾನವನ್ನು ತಕ್ಷಣದಿಂದಲೇ ತಡೆ ಹಿಡಿಯಲಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು ತಿಳಿಸಿದ್ದಾರೆ. ರಾತ್ರಿ ಕಾರ್ಯಾಚರಣೆಯ ನಿಯಮಾವಳಿಗೆ ಮಾಡಲಾಗಿರುವ ಕೆಲವು ಬದಲಾವಣೆಗಳಿಗೆ ‘ಇಂಡಿಗೊ’ ಸಂಸ್ಥೆಗೆ ಫೆ.10ರವರೆಗೆ ಒಂದು ಸಲದ ವಿನಾಯಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಮುಂದಿನ ಮೂರು ದಿನಗಳಲ್ಲಿ ಎಲ್ಲ ವಿಮಾನಗಳ ಹಾರಾಟವು ಸಹಜಸ್ಥಿತಿಗೆ ಮರಳಲಿದ್ದು ವಿಮಾನಗಳ ಹಾರಾಟದ ವ್ಯತ್ಯಯಕ್ಕೆ ಕಾರಣ ಹಾಗೂ ಹೊಣೆಗಾರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಈಗ ಇಂಡಿಗೊ ಏರ್‌ಲೈನ್ಸ್‌ನಲ್ಲಿ ಸೃಷ್ಟಿಯಾಗಿರುವ ವಿಮಾನಗಳ ಹಾರಾಟವನ್ನು ಸಹಜಸ್ಥಿತಿಗೆ ತರಲು ತುರ್ತು ಹಾಗೂ ಪೂರ್ವಭಾವಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಾಯ್ಡು ಹೇಳಿದ್ದಾರೆ.

‘ಎಫ್‌ಡಿಟಿಲ್‌ ಆದೇಶವನ್ನು ಡಿಜಿಸಿಎ ತಕ್ಷಣದಿಂದಲೇ ತಡೆಹಿಡಿದಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ಜೊತೆಗೆ ಹಿರಿಯ ನಾಗರಿಕರು ವಿದ್ಯಾರ್ಥಿಗಳು ರೋಗಿಗಳು ನಿಗದಿತ ಸಮಯದಲ್ಲಿ ಪ್ರಯಾಣ ಮಾಡಲು ಅನುವು ಮಾಡಿಕೊಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನೂತನ ನೀತಿ ಅಳವಡಿಸಿಕೊಳ್ಳಲು ಎರಡು ವರ್ಷಗಳ ಸಮಯವಿತ್ತು. ಹೀಗಿದ್ದರೂ ಕೂಡ ನಮ್ಮ ತಪ್ಪು ನಿರ್ಣಯದಿಂದಲೇ ಇಡೀ ಕಾರ್ಯಾಚರಣೆ ಸ್ಥಗಿತಗೊಳ್ಳಲು ಕಾರಣವಾಯಿತು’ ಎಂದು ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆಯು ಡಿಜಿಸಿಎ ಮುಂದೆ ಒಪ್ಪಿಕೊಂಡಿದೆ.

ಪ್ರಯಾಣಿಕರ ಸುರಕ್ಷತೆಯಿಂದ ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುವ ಹೊಸ ನೀತಿಯು ಕಳೆದ ತಿಂಗಳಿನಿಂದಲೇ ಜಾರಿಗೊಳಿಸಿದೆ.  ಇಂಡಿಗೊ ಏರ್‌ಲೈನ್ಸ್‌ 2 ಸಾವಿರ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದು ದೇಶಿಯ ಮಾರುಕಟ್ಟೆಯಲ್ಲಿ ಶೇಕಡ 60ರಷ್ಟು ಪಾಲು ಹೊಂದಿದೆ. 

ರಾಹುಲ್‌ ಗಾಂಧಿ ಕಿಡಿ
ಕೇಂದ್ರ ಸರ್ಕಾರವು ಏಕಸ್ವಾಮ್ಯದ ಮಾದರಿಯನ್ನು ಪೋಷಿಸಿದ ಪರಿಣಾಮ ಇದು. ಸರ್ಕಾರದ ಈ ನಿಲುವಿಗಾಗಿ ಸಾಮಾನ್ಯ ಭಾರತೀಯರು ಬೆಲೆ ತೆರುವಂತಾಗಿದೆ. ವಿಮಾನಗಳ ವಿಳಂಬ ರದ್ದತಿಯಿಂದ ಪ್ರಯಾಣಿಕರು ಅಸಹಾಯಕರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ನ್ಯಾಯಸಮ್ಮತ ಸ್ಪರ್ಧೆ ಬೇಕಾಗಿದೆಯೇ ಹೊರತು ಏಕಸ್ವಾಮ್ಯದ ಮ್ಯಾಚ್‌ ಫಿಕ್ಸಿಂಗ್‌ ಅಲ್ಲ - ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ

ಇಂದು ಸಹ ಒಂದು ಸಾವಿರ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

‘ಶನಿವಾರ ಸಹ ಸುಮಾರು ಒಂದು ಸಾವಿರ ಮಾರ್ಗಗಳಲ್ಲಿ ಸಂಸ್ಥೆಯ ವಿಮಾನ ಹಾರಾಟ ರದ್ದಾಗಲಿದ್ದು, ಡಿಸೆಂಬರ್‌ 10ರಿಂದ 15ರ ವೇಳೆಗೆ ಸಂಚಾರ ಸಹಜಸ್ಥಿತಿಗೆ ಬರಲಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ತಿಳಿಸಿದ್ದಾರೆ.

ಶುಕ್ರವಾರ ಅರ್ಧಕ್ಕಿಂತ ವಿಮಾನಗಳ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ಅಡಚಣೆ ಉಂಟಾದ ಕುರಿತು ವಿಡಿಯೊ ಸಂದೇಶದಲ್ಲಿ ಕ್ಷಮೆಯಾಚಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ನಾವು ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ಆದ್ದರಿಂದ, ಎಲ್ಲ ವ್ಯವಸ್ಥೆಗಳು ಹಾಗೂ ವೇಳಾಪಟ್ಟಿಯನ್ನು ಮರುನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ ’ ಎಂದು ಹೇಳಿದ್ದಾರೆ.

ಈ ಕ್ರಮಗಳಿಂದ ಶನಿವಾರವೂ ವಿಮಾನ ಹಾರಾಟ ಮಾರ್ಗದ ರದ್ಧತಿ ಸಾವಿರಕ್ಕೂ ಕಡಿಮೆ ಇರಲಿದೆ. ಎಫ್‌ಡಿಟಿಎಲ್‌ ಜಾರಿಗೆ ಡಿಜಿಸಿಎ ತಾತ್ಕಾಲಿಕ ತಡೆ ನೀಡಿರುವುದು ದೊಡ್ಡಮಟ್ಟದ ಸಹಾಯವಾಗಿದೆ’ ಎಂದು ಎಲ್ಬರ್ಸ್‌ ತಿಳಿಸಿದ್ದಾರೆ.

ಶುಕ್ರವಾರದ ಬೆಳವಣಿಗೆಗಳು
  • ಇಂಡಿಗೊ ಇತಿಹಾಸದಲ್ಲೇ ಗರಿಷ್ಠ ವಿಮಾನಗಳ ಹಾರಾಟ ರದ್ದು

  • ಡಿ.5ರಿಂದ 15ರವರೆಗೆ ಪ್ರಯಾಣ ರದ್ದು ಮಾಡಿದ ಎಲ್ಲ ಟಿಕೆಟ್‌ ಹಣ ವಾಪಸ್‌

  • ಪ್ರಯಾಣದ ಮರುಹೊಂದಾಣಿಕೆಗೂ ಅವಕಾಶ ಕಲ್ಪಿಸಿದ ಸಂಸ್ಥೆ

  • ಸತತ ಮೂರನೇ ಸಲ ಪ್ರಯಾಣಿಕರ ಕ್ಷಮೆಯಾಚಿಸಿದ ಇಂಡಿಗೊ ಸಂಸ್ಥೆ

  • ಇತರೆ ವಿಮಾನಯಾನ ಸಂಸ್ಥೆಗಳಿಂದ ಪ್ರಯಾಣ ದರ ಏರಿಕೆ

  • ಸಾವಿರಾರು ಪ್ರಯಾಣಿಕರು ಉಳಿದುಕೊಳ್ಳಲು ದೇಶದಾದ್ಯಂತ ಹೋಟೆಲ್‌ಗಳ ಸಾವಿರಾರು ಕೊಠಡಿ ಬುಕ್ಕಿಂಗ್‌

  • ನಿಲ್ದಾಣದ ಒಳಗಿರುವ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಹಿರಿಯ ನಾಗರಿಕರಿಗೆ ಲಾಂಜ್‌ ಪ್ರವೇಶಕ್ಕೂ ಅನುಮತಿ

‘ಇಂಡಿಗೊ’ ಸಮಸ್ಯೆಯಿಂದ ಸಾವಿರಾರು ಪ್ರಯಾಣಿಕರಂತೆ ನಾನು ಕೂಡ ಸಂಕಷ್ಟಕ್ಕೆ ಸಿಲುಕಿದ್ದೇನೆ. ನನ್ನ ಕಿರಿಯ ಸಹೊದ್ಯೋಗಿಯ ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಕುರಿತು ಕ್ಷಮೆಯಾಚಿಸುತ್ತೇನೆ.
ಸೈಮನ್‌ ವಾಂಗ್‌, ಭಾರತದಲ್ಲಿ ಸಿಂಗಾಪುರ ರಾಯಭಾರಿ
‘ಇಂಡಿಗೊ’ ಸಂಸ್ಥೆಗೆ ಪೈಲಟ್‌ಗಳ ವಿಶ್ರಾಂತಿ ನೀತಿಯಿಂದ ಡಿಜಿಸಿಎ ರಿಯಾಯಿತಿ ನೀಡಿರುವುದು ಆಯ್ದ ಹಾಗೂ ಅಸುರಕ್ಷಿತ ನಿರ್ಧಾರವಾಗಿದೆ.  ವಿಮಾನಯಾನ ಅವಶ್ಯಕತೆಗಳಿಗೆ ಸಂಸ್ಥೆಯೇ ರೂ‍ಪಿಸಿದ ಮಾನದಂಡಗಳ ತತ್ವ ಹಾಗೂ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ
ಸ್ಯಾಮ್‌ ಥಾಮಸ್‌, ಭಾರತೀಯ ಪೈಲಟ್‌ಗಳ ಒಕ್ಕೂಟದ ಅಧ್ಯಕ್ಷ
ಮುಂದಿನ 48 ಗಂಟೆಯ ಒಳಗಾಗಿ ಕಾರ್ಯಾಚರಣೆಗಳನ್ನು ಸುಗಮಗೊಳಿಸಿ ಸಮಯಪಾಲನೆಯನ್ನು ಸುಧಾರಿಸಲು ನಿರಂತರ ಪ್ರಯತ್ನಿಸುತ್ತಿದ್ದೇವೆ
–ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.