ADVERTISEMENT

ಬಿಕ್ಕಟ್ಟು ನಿರ್ವಹಣಾ ತಂಡದಿಂದ ನಿರಂತರ ನಿಗಾ: ಇಂಡಿಗೊ ಸ್ಥಿತಿಗತಿ ಕುರಿತು ಮಂಡಳಿ

ಪಿಟಿಐ
Published 7 ಡಿಸೆಂಬರ್ 2025, 15:49 IST
Last Updated 7 ಡಿಸೆಂಬರ್ 2025, 15:49 IST
ಇಂಡಿಗೊ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವುಂಟಾದ ಕುರಿತಂತೆ ಕೇಂದ್ರ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಕಿಂಜಾರ್ಪು ಅವರು ಭಾನುವಾರ ನವದೆಹಲಿಯಲ್ಲಿ ಸಭೆ ನಡೆಸಿದರು–ಪಿಟಿಐ ಚಿತ್ರ
ಇಂಡಿಗೊ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವುಂಟಾದ ಕುರಿತಂತೆ ಕೇಂದ್ರ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಕಿಂಜಾರ್ಪು ಅವರು ಭಾನುವಾರ ನವದೆಹಲಿಯಲ್ಲಿ ಸಭೆ ನಡೆಸಿದರು–ಪಿಟಿಐ ಚಿತ್ರ   

ಮುಂಬೈ: ಇಂಡಿಗೊದ ಮಾತೃಸಂಸ್ಥೆಯಾದ ‘ಇಂಟರ್‌ಗ್ಲೋವ್‌ ಏವಿಯೇಷನ್‌’ ಬಿಕ್ಕಟ್ಟು ನಿರ್ವಹಣಾ ತಂಡ(ಸಿಎಂಜಿ)ಯನ್ನು ರಚಿಸಿದ್ದು, ಈಗ ಸೃಷ್ಟಿಯಾಗಿರುವ ಸಮಸ್ಯೆಯ ಮೇಲೆ ನಿರಂತರ ನಿಗಾ ವಹಿಸುತ್ತಿದೆ ಎಂದು ಏರ್‌ಲೈನ್ಸ್‌ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

‘ಗ್ರಾಹಕರು ಎದುರಿಸಿದ ಎಲ್ಲ ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಂಪನಿಯ ನಿರ್ದೇಶಕರು ಶ್ರಮಿಸುತ್ತಿದ್ದು, ಹಣ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದೆ.

ಇಂಡಿಗೊ ಸಿಇಒ ಪೀಟರ್‌ ಎಲ್ಬರ್ಸ್‌, ಸಿಒಒ ಇಸಿಡ್ರೊ ಪೊಕ್ರೆರಸ್‌ ಅವರಿಗೆ ಡಿಜಿಸಿಎ ನೋಟಿಸ್‌ ಜಾರಿಗೊಳಿಸಿದ್ದು, 24 ಗಂಟೆಯ ಒಳಗಾಗಿ ವಿವರಣೆ ನೀಡುವಂತೆ ತಿಳಿಸಿದೆ. ಇದಾದ ಮರುದಿನವೇ, ಸಂಸ್ಥೆಯು ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ADVERTISEMENT

‘ವಿಮಾನಗಳ ರದ್ದು ಕುರಿತಂತೆ ಆಂತರಿಕ ತನಿಖೆಯ ವರದಿ ಆಧರಿಸಿ, ಇಂಡಿಗೊ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ವಿಮಾನಗಳ ವಿಳಂಬ ಹಾಗೂ ರದ್ದು ಕುರಿತಂತೆ ಇಂಟರ್‌ಗ್ಲೋಬ್‌ ಎವಿಯೇಷನ್‌ ಲಿಮಿಟೆಡ್‌ (ಇಂಡಿಗೊ) ಸಂಸ್ಥೆಯ ನಿರ್ದೇಶಕರು ಮೊದಲ ಸಭೆ ನಡೆಸಿದರು. ಈ ವೇಳೆ ಸಂಸ್ಥೆಯ ಸದಸ್ಯರು ಬಿಕ್ಕಟ್ಟು ಉದ್ಬವವಾದ ಕುರಿತು ವಿಸ್ತೃತ  ಮಾಹಿತಿ ಪಡೆದಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಸ್ಥರಾದ ವಿಕ್ರಮ್‌ ಸಿಂಗ್‌ ಮೆಹ್ತಾ, ಬೋರ್ಡ್‌ ನಿರ್ದೇಶಕರಾದ ಗ್ರೆಗ್‌ ಸರೆಟಸ್ಕಿ, ಮೈಕ್‌ ವೈಟಕೆರ್‌, ಅಮಿತಾಬ್‌ ಕಾಂತ್‌ ಹಾಗೂ ಸಿಇಒ ಪೀಟರ್‌ ಎಲ್ಬರ್ಸ್‌ ನೇತೃತ್ವದಲ್ಲಿ ಸಿಎಂಜಿ ರಚಿಸಲಾಗಿತ್ತು. ಈ ತಂಡವು ನಿರಂತರ ಸಭೆ ನಡೆಸಿ, ಆಡಳಿತ ಮಂಡಳಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದ್ದು, ವಿಮಾನಗಳ ಹಾರಾಟವನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.