ADVERTISEMENT

ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಇಂಡಿಗೊ ವಿಮಾನ ಗುವಾಹಟಿಗೆ ವಾಪಸ್

ಪಿಟಿಐ
Published 13 ಜನವರಿ 2024, 14:23 IST
Last Updated 13 ಜನವರಿ 2024, 14:23 IST
-
-   

ಗುವಾಹಟಿ/ ಮುಂಬೈ: ಹವಾಮಾನ ವೈಪರಿತ್ಯದಿಂದಾಗಿ ಬಾಂಗ್ಲಾದೇಶದ ಢಾಕಾಗೆ ಮಾರ್ಗ ಬದಲಾವಣೆ ಮಾಡಿದ್ದ ಇಂಡಿಗೊ ವಿಮಾನವು ಗುವಾಹಟಿಯ ಲೋಕಪ್ರಿಯ ಗೋಪಿನಾಥ ಬೊರ್ಡೊಲೊಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶನಿವಾರ ಬೆಳಿಗ್ಗೆ 10.54ಕ್ಕೆ ಢಾಕಾದಿಂದ ಹೊರಟ ವಿಮಾನವು 11.10 ಗಂಟೆಗೆ ಗುವಾಹಟಿಗೆ ಬಂದಿದೆ. 

ಶುಕ್ರವಾರ ಮುಂಬೈನಿಂದ ಗುವಾಹಟಿಗೆ ಹೊರಟಿದ್ದ ಇಂಡಿಗೊ 5319 ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಢಾಕಾಗೆ ಮಾರ್ಗ ಬದಲಾವಣೆ ಮಾಡಿತ್ತು. ಈ ವಿಮಾನವನ್ನು ಮೊದಲಿಗೆ ಕೊಲ್ಕತ್ತ ಮತ್ತು ಭುವನೇಶ್ವರಗೆ ಮಾರ್ಗ ಬದಲು ಮಾಡಲು ಯತ್ನಿಸಲಾಯಿತು. ಆದರೆ, ಕೋಲ್ಕತ್ತದಲ್ಲಿನ ಹವಾಮಾನ ವೈಪರಿತ್ಯ ಮತ್ತು ಭುವನೇಶ್ವರದಲ್ಲಿ ರನ್‌ವೇ ಮುಚ್ಚಿದ್ದರಿಂದ ಸಾಧ್ಯವಾಗಿರಲಿಲ್ಲ ಎಂದು ಇಂಡಿಗೊ ವಿಮಾನದ ವಕ್ತಾರ ತಿಳಿಸಿದ್ದಾರೆ. 

ADVERTISEMENT

ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ ಕುರಿತು ಮಾಹಿತಿ ನೀಡಲಾಗುತ್ತಿತ್ತು ಎಂದು ವಿಮಾನ ಸಂಸ್ಥೆ ತಿಳಿಸಿದೆ. 

ಈ ವಿಮಾನದಲ್ಲಿ ಗುವಾಹಟಿಗೆ ಪ್ರಯಾಣಿಸಿದ ಎಐಸಿಸಿ ಪ್ರತಿನಿಧಿ ಸೂರಜ್ ಸಿಂಗ್ ಠಾಕೂರ್, ‘ಕೊನೆಗೂ ಗುವಾಹಟಿಗೆ ಬಂದಿಳಿದೆ. 12 ಗಂಟೆಗಳ ವಿಮಾನ ಪ್ರಯಾಣದಲ್ಲಿ ನಾನು ಯೂರೋಪ್ ತಲುಪುತ್ತೇನೆ ಅಂದುಕೊಂಡಿದ್ದೆ. ಆದರೆ, ಗುವಾಹಟಿಗೆ ಬಂದಿಳಿದಿರುವುದಕ್ಕೆ ಸಂತೋಷವಾಗಿದೆ’ ಎಂದು ‘ಎಕ್ಸ್‌’ ವೇದಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.