
ಇಂದಿರಾ ಗಾಂಧಿ ಅವರ ಪುಣ್ಯತಿಥಿ ಸಂದರ್ಭದಲ್ಲಿ ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂನಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರವೊಂದನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕಣ್ತುಂಬಿಕೊಂಡರು
ಪಿಟಿಐ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ನಿಮಿತ್ತ ಕಾಂಗ್ರೆಸ್ ಪಕ್ಷವು ಅವರಿಗೆ ಶುಕ್ರವಾರ ಭಾವಪೂರ್ಣ ಗೌರವ ಸಲ್ಲಿಸಿದೆ. ಅವರ ಕಾರ್ಯಗಳನ್ನು ಸ್ಮರಿಸಿ ಪಕ್ಷದ ನಾಯಕರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರರು, ಇಂದಿರಾ ಗಾಂಧಿ ಅವರ ಸಮಾಧಿ ಇರುವ ‘ಶಕ್ತಿ ಸ್ಥಳ’ಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಸಫ್ದರ್‌ಜಂಗ್ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಮ್‌ಗೂ ಭೇಟಿ ನೀಡಿ, ಅಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
‘ಇಂದಿರಾ ಗಾಂಧಿ ಒಬ್ಬ ಧೀಮಂತ, ಬದ್ಧತೆಯುಳ್ಳ ಹಾಗೂ ಬಲಿಷ್ಠರನ್ನು ಎದುರಿಸುವ ಛಾತಿ ಉಳ್ಳ ನಾಯಕಿಯಾಗಿದ್ದರು’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಅಜ್ಜಿ, ಭಾರತದ ಅಸ್ಮಿತೆ ಹಾಗೂ ಸ್ವಾಭಿಮಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ನೀವು ನಮಗೆ ಕಲಿಸಿದ್ದೀರಿ. ನಿಮ್ಮ ಧೈರ್ಯ, ಸಹಾನುಭೂತಿ ಹಾಗೂ ದೇಶಭಕ್ತಿ ನಾನಿಡುವ ಪ್ರತಿ ಹೆಜ್ಜೆಗೂ ಸ್ಫೂರ್ತಿ ನೀಡುತ್ತಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೇಶದ ಮೊದಲ ಮಹಿಳಾ ಪ್ರಧಾನಿ, ಭಾರತ ರತ್ನ ಇಂದಿರಾ ಗಾಂಧಿ ಅವರಿಗೆ ಪುಣ್ಯತಿಥಿಯಂದು ಹೃದಯತುಂಬಿದ ನಮನಗಳು. ಪ್ರಬಲ ನಾಯಕತ್ವ, ಅಸಾಧಾರಣ ಶಕ್ತಿ ಹಾಗೂ ಬದ್ಧತೆಯ ಪ್ರತಿರೂಪದಂತಿದ್ದ ಇಂದಿರಾ ಗಾಂಧಿ ಅವರು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷ ತನ್ನ ‘ಎಕ್ಸ್’ ಖಾತೆಯಲ್ಲಿ ಸ್ಮರಿಸಿದೆ.
ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂನಲ್ಲಿ ನಡೆದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು
ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂನಲ್ಲಿ ನಡೆದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇದ್ದರು
ಇಂದಿರಾ ಗಾಂಧಿ ಅಸಾಧಾರಣ ಸ್ಥೈರ್ಯ ಧೈರ್ಯವೇ ಮೈವೆತ್ತಿದ್ದ ವ್ಯಕ್ತಿಯಾಗಿದ್ದರು. ಅವರ 41ನೇ ಪುಣ್ಯತಿಥಿ ಈ ಸಂದರ್ಭದಲ್ಲಿ ದೇಶವೇ ಅವರಿಗೆ ನಮನ ಸಲ್ಲಿಸುತ್ತಿದೆಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಇಂದಿರಾ ಗಾಂಧಿಯವರು ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. 1984 ಅಕ್ಟೋಬರ್ 31ರಂದು ಭಾರತ ಅಪ್ರತಿಮ ನಾಯಕಿಯನ್ನು ಕಳೆದುಕೊಂಡಿತುಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ತಮ್ಮ ದೂರದೃಷ್ಟಿ ಚತುರ ನಾಯಕತ್ವ ಕರ್ತೃತ್ವ ಶಕ್ತಿ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆ ರಕ್ಷಿಸುವಲ್ಲಿ ಇಂದಿರಾ ಗಾಂಧಿ ಮಹತ್ವದ ಪಾತ್ರ ವಹಿಸಿದ್ದರು. ಸಶಕ್ತ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.