ADVERTISEMENT

ಇಂದಿರಾ ಜೈಸಿಂಗ್‌ ಮನೆ, ಕಚೇರಿಯಲ್ಲಿ ಸಿಬಿಐ ಶೋಧ

ವಿದೇಶಿ ದೇಣಿಗೆ ದುರ್ಬಳಕೆ: ಆರೋಪ ನಿರಾಕರಿಸಿದ ಹಿರಿಯ ವಕೀಲೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:00 IST
Last Updated 11 ಜುಲೈ 2019, 20:00 IST
ಸಿಬಿಐ ಶೋಧದ ಸಂದರ್ಭದಲ್ಲಿ ದೆಹಲಿಯ ಮನೆಯಲ್ಲಿ ಇಂದಿರಾ ಜೈಸಿಂಗ್‌ –ಪಿಟಿಐ ಚಿತ್ರ
ಸಿಬಿಐ ಶೋಧದ ಸಂದರ್ಭದಲ್ಲಿ ದೆಹಲಿಯ ಮನೆಯಲ್ಲಿ ಇಂದಿರಾ ಜೈಸಿಂಗ್‌ –ಪಿಟಿಐ ಚಿತ್ರ   

ನವದೆಹಲಿ: ಸುಪ್ರೀಂ ಕೋರ್ಟ್‌ನ ವಕೀಲೆ ಇಂದಿರಾ ಜೈಸಿಂಗ್‌ ಅವರ ನಿವಾಸ ಮತ್ತು ಅವರ ಪತಿ ಆನಂದ್‌ ಗ್ರೋವರ್ ಸ್ಥಾಪಿಸಿರುವ ಎನ್‌ಜಿಒ ‘ಲಾಯರ್ಸ್‌ ಕಲೆಕ್ಟಿವ್‌’ನ ದೆಹಲಿ, ಮುಂಬೈ ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳುಗುರುವಾರ ಶೋಧ ನಡೆಸಿದ್ದಾರೆ.

ನಿಜಾಮುದ್ದೀನ್‌ನಲ್ಲಿರುವ ಇಂದಿರಾ ಅವರ ನಿವಾಸ ಮತ್ತು ಕಚೇರಿ, ಜಂಗ್‌ಪುರ ಮತ್ತು ಮುಂಬೈನಲ್ಲಿ ಇರುವ ಎನ್‌ಜಿಒ ಕಚೇರಿಗಳಲ್ಲಿಯೂ ಶೋಧ ನಡೆದಿದೆ. ಎನ್‌ಜಿಒಗೆ ವಿದೇಶಿ ನೆರವು ಸ್ವೀಕರಿಸುವ ಪ್ರಕ್ರಿಯೆಯಲ್ಲಿ ವಿದೇಶಿ ನೆರವು (ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ಎನ್‌ಜಿಒಗೆ ಸಂದಾಯವಾಗಿರುವ ವಿದೇಶಿ ನೆರವಿನ ಮೊತ್ತದ ಬಳಕೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿಕೇಂದ್ರ ಗೃಹ ಸಚಿವಾಲಯವು ಸಲ್ಲಿಸಿದ್ದ ದೂರು ಆಧರಿಸಿ ಎನ್‌ಜಿಒ ವಿರುದ್ಧ ಸಿಬಿಐ ಅಧಿಕಾರಿಗಳು ಪ್ರಥಮ ತನಿಖಾ ವರದಿಯನ್ನು ದಾಖಲಿಸಿದ್ದಾರೆ.

ADVERTISEMENT

ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ, ಸಚಿವಾಲಯವು ಸಿಬಿಐಗೆ ಸಲ್ಲಿಸಿರುವ ದೂರಿನಲ್ಲಿ ನೆರವು ಬಳಕೆಯ ಅವ್ಯವಹಾರದಲ್ಲಿ ಇಂದಿರಾ ಅವರ ಪಾತ್ರವೂ ಇರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

ವಿದೇಶಿ ನೆರವು ದುರ್ಬಳಕೆಗೆ ಆರೋಪಕ್ಕೆ ಸಂಬಂಧಿಸಿದಂತೆ ಲಾಯರ್ಸ್‌ ಕಲೆಕ್ಟಿವ್‌ನ ಅಧ್ಯಕ್ಷರೂ ಆಗಿರುವ ಗ್ರೋವರ್‌, ಸಂಸ್ಥೆಯ ಇತರೆ ಪದಾಧಿಕಾರಿಗಳು ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಈಗ ಎಫ್‌ಐಆರ್‌ ದಾಖಲಿಸಲಾಗಿದೆ.

ಗೃಹ ಸಚಿವಾಲಯವು ಸಿಬಿಐಗೆ ಸಲ್ಲಿಸಿದ್ದ ದೂರಿನಲ್ಲಿ, ಎನ್‌ಜಿಒಗೆ 2006–07 ಮತ್ತು 2014–15ರ ಅವಧಿಯಲ್ಲಿ ₹ 32.39 ಕೋಟಿಗೂ ಹೆಚ್ಚಿನ ವಿದೇಶಿ ನೆರವು ಬಂದಿದೆ. ಈ ಹಣದ ಬಳಕೆಯಲ್ಲಿ ಅವ್ಯವಹಾರ ನಡೆದಿದೆ. ವಿದೇಶಿ ನೆರವು (ನಿಯಂತ್ರಣ) ಕಾಯ್ದೆ ಉಲ್ಲಂಘನೆಯೂ ಆಗಿದೆ ಎಂದು ಆರೋಪಿಸಿತ್ತು.

ವಿರೋಧಪಕ್ಷಗಳ ಟೀಕೆ:ಇಂದಿರಾ ಜೈಸಿಂಗ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಸಿಬಿಐ ಶೋಧ ನಡೆಸಿರುವುದನ್ನು ವಿರೋಧಪಕ್ಷಗಳು ಖಂಡಿಸಿವೆ. ಕೇಂದ್ರ ಸರ್ಕಾರದಿಂದ ಅಧಿಕಾರದ ಸಂಪೂರ್ಣ ದುರ್ಬಳಕೆ ಆಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿವೆ.

‘ಬೆದರಿಕೆ ಮತ್ತು ದಬ್ಬಾಳಿಕೆಯ ಇಂಥ ಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಪಡಿಸಿ ವಿರೋಧಪಕ್ಷಗಳ ಸಂಸದರ ಸಮೂಹವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

‘ಇಂದಿರಾ ಜೈಸಿಂಗ್ ಅವರ ನಿವಾಸ, ಲಾಯರ್ಸ್ ಕಲೆಕ್ಟಿವ್ ಕಚೇರಿಯಲ್ಲಿ ನಡೆದಿರುವ ಶೋಧವು ಬೆದರಿಕೆ ಮತ್ತು ದೌರ್ಜನ್ಯದ ಕ್ರಮವಲ್ಲದೇ ಮತ್ತೇನೂ ಅಲ್ಲ’ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಸಿಪಿಐ, ಸಿಪಿಎಂ ಸಂಸದರು ಆರೋಪಿಸಿದ್ದಾರೆ. ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿರುವ ಈ ಇಬ್ಬರು ವಿಚಾರಣೆಗೆ ಪೂರ್ಣ ಸಹಕಾರ ನೀಡಿದ್ದಾರೆ. ಆದರೂ, ಏಕಾಏಕಿ ದಾಳಿ ನಡೆಸಿರುವುದು ದಿಗ್ಭ್ರಮೆ ಮೂಡಿಸುತ್ತಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ದ್ವೇಷದ ಕ್ರಮ–ಟಿಎಂಸಿ:ಸಿಬಿಐ ದಾಳಿಯನ್ನು ದ್ವೇಷದ ಕ್ರಮ ಎಂದು ಬಣ್ಣಿಸಿರುವ ತೃಣಮೂಲ ಕಾಂಗ್ರೆಸ್, ಇಂಥ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ವಿರೋಧಿಗಳಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ.

‘ದ್ವೇಷದ ದಾಳಿಗಳ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆ. ಈ ಸರ್ಕಾರ ವಿರೋಧಿ ಧ್ವನಿಯ ಎಲ್ಲ ನಾಗರಿಕರಿಗೆ ಕಿರುಕುಳ ನೀಡುತ್ತಿದೆ. ಇದೊಂದು ರೀತಿ ಸೂಪರ್‌ ತುರ್ತುಸ್ಥಿತಿ’ ಎಂದು ಟಿಎಂಸಿ ರಾಷ್ಟ್ರೀಯ ವಕ್ತಾರಡೆರೆಕ್ ಒ ಬ್ರಯಾನ್ ಅವರು ಟ್ವೀಟ್ ಮಾಡಿದ್ದಾರೆ.

‘ವಕಾಲತ್ತು ವಹಿಸಿದ್ದಕ್ಕಾಗಿ ದಾಳಿ’
‘ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಮಾಜಿ ನೌಕರರೊಬ್ಬರು ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪ ಕುರಿತ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದಕ್ಕಾಗಿ ಈ ಪ್ರಕರಣದಲ್ಲಿ ಬಲಿಪಶು ಮಾಡಿರುವುದು ಕಂಡುಬರುತ್ತಿದೆ’ ಎಂದು ಇಂದಿರಾ ಜೈಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

‘ಆದರೆ, ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸದೇ ಒಬ್ಬ ಮಹಿಳಾ ವಕೀಲೆಯಾಗಿ, ವಕೀಲರ ಸಂಘದ ಹಿರಿಯ ಸದಸ್ಯಳಾಗಿ, ಮಹಿಳೆಯರ ಹಕ್ಕುಗಳ ಪರವಾಗಿ ಹೋರಾಡಲು ಆ ಪ್ರಕರಣದಲ್ಲಿ ವಕಾಲತ್ತು ವಹಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿಬಿಐ ಶೋಧಕ್ಕೆ ಸಂಬಂಧಿಸಿದಂತೆ ಇಂದಿರಾ ಜೈಸಿಂಗ್‌ ಅವರಲ್ಲದೆ, ಆನಂದ್ ಗ್ರೋವರ್‌ ಮತ್ತು ಲಾಯರ್ಸ್ ಕಲೆಕ್ಟಿವ್‌ ಸಂಸ್ಥೆಯು ಪ್ರತ್ಯೇಕ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ‘ಎನ್‌ಜಿಒಗೆ ಬಂದ ವಿದೇಶಿ ನೆರವಿನ ಬಳಕೆಯಲ್ಲಿ ಅವ್ಯವಹಾರವಾಗಿದೆ’ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಇಂದಿರಾ ಜೈಸಿಂಗ್, ‘ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಹಲ ವರ್ಷಗಳಿಂದ ಕೈಗೊಂಡಿರುವ ಕೆಲಸಗಳ ಹಿನ್ನೆಲೆಯಲ್ಲಿ ನಮ್ಮನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.