ಭೋಪಾಲ್: ‘ಭಾರತ ಮತ್ತು ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಸಂದರ್ಭದಲ್ಲಿ ಅಮೆರಿಕದಿಂದ ದೂರವಾಣಿ ಕರೆ ಬಂದ ಹಿಂದೆಯೇ ಪ್ರಧಾನಿ ಮೋದಿ ಶರಣಾದರು’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಟೀಕಿಸಿದರು.
ಇಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘1971ರ ಯುದ್ಧದ ಅವಧಿಯಲ್ಲಿ ಅಮೆರಿಕದಿಂದ ಒತ್ತಡ ಬಂದರೂ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಮಣಿದಿರಲಿಲ್ಲ’ ಎಂದು ಹೇಳಿದರು.
‘ಈಗ ಟ್ರಂಪ್ ಅವರಿಂದ ಒಂದು ಕರೆ ಬಂತು. ನರೇಂದ್ರ ಮೋದಿ ತಕ್ಷಣ ಶರಣಾದರು. ತಲೆಬಾಗುವುದೇ ಬಿಜೆಪಿ ಮತ್ತು ಆರ್‌ಎಸ್ಎಸ್‌ನ ವ್ಯಕ್ತಿತ್ವವಾಗಿದೆ. 1971ರಲ್ಲಿ ಅಮೆರಿಕದ ಒತ್ತಡದ ನಡುವೆಯೂ ಭಾರತವು ಪಾಕಿಸ್ತಾನವನ್ನು ವಿಭಜಿಸಿತ್ತು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಸಂಘಟನೆ ಸೃಜನ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ‘ಸ್ವಾತಂತ್ರ್ಯ ಹೋರಾಟದ ದಿನದಿಂದಲೂ ಶರಣಾಗತಿ ಪತ್ರ ಬರೆಯುವುದು ಆರ್‌ಎಸ್‌ಎಸ್–ಬಿಜೆಪಿಯವರಿಗೆ ಅಭ್ಯಾಸವಾಗಿದೆ’ ಎಂದರು.
‘ಆರ್‌ಎಸ್ಎಸ್ ಮತ್ತು ಬಿಜೆಪಿ ವ್ಯಕ್ತಿತ್ವ ಹಾಗೂ ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ ಇದೇ ಆಗಿದೆ. ಕಾಂಗ್ರೆಸ್ ಎಂದಿಗೂ ಶರಣಾಗಿಲ್ಲ. ಮಹಾತ್ಮಗಾಂಧಿ, ಜವಹರಲಾಲ್ ನೆಹರೂ, ವಲ್ಲಭಬಾಯಿ ಪಟೇಲ್ ಶರಣಾಗಿರಲಿಲ್ಲ. ಅವರು ಹೋರಾಡಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.