ADVERTISEMENT

Republic Day: ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಅತಿಥಿ

ಪಿಟಿಐ
Published 16 ಜನವರಿ 2025, 10:30 IST
Last Updated 16 ಜನವರಿ 2025, 10:30 IST
<div class="paragraphs"><p>ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ</p></div>

ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ

   

ನವದೆಹಲಿ: ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

ಜನವರಿ 26ರಂದು 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇವರು ಅಧ್ಯಕ್ಷರಾದ ಬಳಿಕ ಅವರ ಮೊದಲ ಭಾರತ ಪ್ರವಾಸ ಇದಾಗಿದೆ.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಪ್ರಬೊವೊ ಸುಬಿಯಾಂಟೊ ಎರಡು ದಿನಗಳ ಕಾಲ (ಜ.25, 26) ಭಾರತ ಪ್ರವಾಸದಲ್ಲಿರುವರು.

ಇಂಡೋನೇಷ್ಯಾ ಅಧ್ಯಕ್ಷರ ಈ ಭೇಟಿ ಉಭಯ ದೇಶಗಳ ನಾಯಕತ್ವವನ್ನು ಬಲಪಡಿಸಲಿದೆ. ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಚರ್ಚಿಸಲು ಈ ಭೇಟಿ ಉತ್ತಮ ಅವಕಾಶ ಒದಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

2024ರ ಜೂನ್‌ನಲ್ಲಿ ಸುಬಿಯಾಂಟೊ ಅವರು ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ.

 ಪ್ರತಿ ವರ್ಷ ಭಾರತ ಗಣರಾಜ್ಯೋತ್ಸವ ಆಚರಣೆಗೆ ಜಾಗತಿಕ ನಾಯಕರನ್ನು ಆಹ್ವಾನಿಸುತ್ತದೆ. 2024ರಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. 2023ರಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌–ಸಿಸಿ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.

2021 ಮತ್ತು 2022ರಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವಕ್ಕೆ ಭಾರತ ಸರ್ಕಾರ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ.  

2020ರಲ್ಲಿ ಬ್ರೆಜಿಲ್ ಅಧ್ಯಕ್ಷ, 2019ರಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ,  2018ರಲ್ಲಿ 10 ಆಸಿಯನ್ ದೇಶಗಳ ನಾಯಕರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.