ADVERTISEMENT

ಗಡಿಯಲ್ಲಿ ಸಂಘರ್ಷ ಸಮಯದಲ್ಲಿ ವಾಯುಪಡೆಗೆ ರಫೇಲ್‌ ಸೇರ್ಪಡೆ ಮಹತ್ವದ ಹೆಜ್ಜೆ

ತಂಟೆಕೋರ ಚೀನಾಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಂದ ಸ್ಪಷ್ಟ ಸಂದೇಶ

ಪಿಟಿಐ
Published 10 ಸೆಪ್ಟೆಂಬರ್ 2020, 17:08 IST
Last Updated 10 ಸೆಪ್ಟೆಂಬರ್ 2020, 17:08 IST
ಅಂಬಾಲಾದ ವಾಯು ನೆಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ ಅವರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸ್ಮರಣಿಕೆ ನೀಡಿದರು –ಪಿಟಿಐ ಚಿತ್ರ
ಅಂಬಾಲಾದ ವಾಯು ನೆಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ ಅವರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸ್ಮರಣಿಕೆ ನೀಡಿದರು –ಪಿಟಿಐ ಚಿತ್ರ   

ಅಂಬಾಲಾ: ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಬಹುಪಯೋಗಿ ಐದು ರಫೇಲ್‌ ಯುದ್ಧವಿಮಾನಗಳನ್ನು ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು.

ಚೀನಾ ಗಡಿಯಲ್ಲಿ ಸಂಘರ್ಷ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಈ ಯುದ್ಧ ವಿಮಾನಗಳನ್ನು ಸೇರ್ಪಡೆ ಮಾಡಿರುವುದು ವಾಯು ಪಡೆಯ ಶಕ್ತಿಯನ್ನು ಹೆಚ್ಚಿಸಿದೆ.

ಇಲ್ಲಿನ ವಾಯು ನೆಲೆಯಲ್ಲಿ ನಡೆದ ಆಕರ್ಷಕ ಸಮಾರಂಭದಲ್ಲಿ ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ಜರುಗಿತು.

ADVERTISEMENT

ವಾಯುಪಡೆಯ 17 ಸ್ಕ್ವಾಡ್ರನ್‌ಗೆ ಈ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಿದ ಗಳಿಗೆಗೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌, ಫ್ರಾನ್ಸ್‌ನ
ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ,
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌. ಭದೌರಿಯಾ ಸಾಕ್ಷಿಯಾದರು.

ದೇಶೀಯವಾಗಿ ನಿರ್ಮಿಸಲಾಗಿರುವ ಯುದ್ಧವಿಮಾನ ತೇಜಸ್‌ ಹಾಗೂ ಹೆಲಿಕಾಪ್ಟರ್‌ ಸಾರಂಗ್‌ಗಳಿಂದ ಬಾನಂಗಳದಲ್ಲಿ ನಡೆದ ಕಸರತ್ತು ಗಮನ ಸೆಳೆಯಿತು.

ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ತಯಾರಿಸಿರುವ ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳು ನಿಖರ ದಾಳಿ ಮಾಡುವ ಸಾಮರ್ಥ್ಯದಿಂದ ಗಮನಸೆಳೆದಿವೆ.

₹ 59,000 ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧವಿಮಾನಗಳ ಖರೀದಿಗೆ ಫ್ರಾನ್ಸ್‌ ಜತೆ ಒಪ್ಪಂದವಾಗಿ ನಾಲ್ಕು ವರ್ಷಗಳಾಗಿದ್ದರೂ, ಮೊದಲ ಹಂತದ ಐದು ಯುದ್ಧವಿಮಾನಗಳನ್ನು ಕಳೆದ ಜುಲೈ 29ಕ್ಕೆ ಭಾರತಕ್ಕೆ ತರಲಾಗಿತ್ತು. ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲಾ ಯುದ್ಧವಿಮಾನಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.