ADVERTISEMENT

ಸಿಂಧೂ ಜಲ ಒಪ್ಪಂದ ಅಮಾನತು: ಪಾಕ್‌ ಪಾಲಿನ ನೀರು ಗರಿಷ್ಠ ಬಳಕೆಯತ್ತ ಚಿತ್ತ

ಪಿಟಿಐ
Published 26 ಏಪ್ರಿಲ್ 2025, 15:11 IST
Last Updated 26 ಏಪ್ರಿಲ್ 2025, 15:11 IST
   

ನವದಹೆಲಿ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿದೆ. ಈ ಮೊದಲು ಈ ಒಪ್ಪಂದದಡಿ ಪಾಕಿಸ್ತಾನವು ಮೂರು ನದಿಗಳ ನೀರು ಬಳಕೆ ಮಾಡಿಕೊಳ್ಳುತ್ತಿತ್ತು.

ಈಗ ಒಪ್ಪಂದವನ್ನು ಅಮಾನತು ಮಾಡಿರುವುದರಿಂದ, ಪಾಕಿಸ್ತಾನ ಪಾಲಿನ ನೀರಿನ ಪೈಕಿ ಗರಿಷ್ಠ ಪ್ರಮಾಣದ ನೀರು ಬಳಕೆ ಮಾಡಿಕೊಳ್ಳುವ ಮಾರ್ಗಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಈ ಕುರಿತ ಪ್ರಸ್ತಾವವನ್ನು ಮಂಡಿಸಲಾಗಿದೆ.

ADVERTISEMENT

ವಿಶ್ವ ಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಏರ್ಪಟ್ಟ ಈ ಒಪ್ಪಂದದಡಿ, ಪೂರ್ವದ ಸಟ್ಲೇಜ್, ರಾವಿ, ಬ್ಯಾಸ್ ನದಿಗಳ ನೀರಿನ ಹಕ್ಕುಗಳು ಸಂಪೂರ್ಣ ಭಾರತಕ್ಕೆ ಸೇರಿದರೆ, ಪಶ್ಚಿಮದ ಸಿಂಧೂ, ಝೇಲಮ್ ಹಾಗೂ ಚಿನಾಬ್‌ ನದಿಗಳ ನೀರಿನ ಮೇಲಿನ ಹಕ್ಕು ಪಾಕಿಸ್ತಾನದ್ದು. 

ಸಟ್ಲೇಜ್, ರಾವಿ, ಬ್ಯಾಸ್ ನದಿಗಳಲ್ಲಿ ವಾರ್ಷಿಕವಾಗಿ ಸರಾಸರಿ 3.3 ಕೋಟಿ ಎಕರೆ ಅಡಿಗಳಷ್ಟು ನೀರು ಹರಿಯುತ್ತದೆ. ಸಿಂಧೂ, ಝೇಲಮ್ ಹಾಗೂ ಚಿನಾಬ್‌ನಲ್ಲಿ ವಾರ್ಷಿಕವಾಗಿ ಸರಾಸರಿ 13.5 ಕೋಟಿ ಎಕರೆ ಅಡಿಗಳಷ್ಟು ನೀರು ಹರಿಯುತ್ತದೆ. ಈ ಲೆಕ್ಕದಲ್ಲಿ, ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಅಧಿಕ.

ಈಗ ಜಲ ಒಪ್ಪಂದವನ್ನು ಅಮಾನತು ಮಾಡಿರುವುದರಿಂದ, ಸಿಂಧೂ, ಝೇಲಂ ಹಾಗೂ ಚಿನಾಬ್ ನದಿಗಳ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಮಾರ್ಗೋಪಾಯಗಳ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಲ ಶಕ್ತಿ ಸಚಿವ ಸಿ.ಆರ್‌.ಪಾಟೀಲ ಅವರು, ‘ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿಯಲು ಬಿಡುವುದಿಲ್ಲ. ಇದನ್ನು ಖಾತ್ರಿಪಡಿಸುವ ಕಾರ್ಯತಂತ್ರವನ್ನು ಸರ್ಕಾರ ರೂಪಿಸುತ್ತಿದೆ’ ಎಂದು ಹೇಳಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ದೀರ್ಘಾವಧಿ ವರೆಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೂಡ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ಹೇಳಿವೆ.

‘ಮೂಲಸೌಕರ್ಯಗಳ ಕೊರತೆ’

ಜಲ ಒಪ್ಪಂದವನ್ನು ಅಮಾನತು ಮಾಡಿರುವ ಕಾರಣ ಮೂರು ನದಿಗಳ ನೀರನ್ನು ಅಧಿಕ ಪ್ರಮಾಣದಲ್ಲಿ ಬಳಸುವುದಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆಯಾದರೂ ಅದಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಕೊರತೆ ಇದೆ ಎಂದು ತಜ್ಞರು ಹೇಳಿದ್ದಾರೆ. ‘ಮುಖ್ಯವಾಗಿ ಪಶ್ಷಿಮದ ನದಿಗಳ ನೀರು ಬಳಕೆಗೆ ಅಗತ್ಯವಿರುವ ಮೂಲಸೌಕರ್ಯಗಳು ಇಲ್ಲ. ಇದು ಪಾಕಿಸ್ತಾನಕ್ಕೆ ನೀರಿನ ಹರಿವು ತಡೆಯುವ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ’ ಎಂದು ಸೌತ್ ಏಷ್ಯನ್ ನೆಟ್‌ವರ್ಕ್ ಆನ್‌ ಡ್ಯಾಮ್ಸ್‌ ರಿವರ್ಸ್ ಅಂಡ್‌ ಪೀಪಲ್ (ಎಸ್‌ಎಎನ್‌ಡಿಆರ್‌ಪಿ)ನ ಹಿಮಾಂಶು ಠಕ್ಕರ್ ಹೇಳುತ್ತಾರೆ.

‘ಚಿನಾಬ್‌ ನದಿಪಾತ್ರದಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದ್ದು ಇವು ಪೂರ್ಣಗೊಳ್ಳಲು 5–7 ವರ್ಷಗಳು ಬೇಕು. ಅಲ್ಲಿಯವರೆಗೆ ನದಿಯ ನೀರು ಪಾಕಿಸ್ತಾನಕ್ಕೆ ಹರಿಯಲಿದೆ. ಈ ಯೋಜನೆಗಳು ಪೂರ್ಣಗೊಂಡಾಗ ನೀರಿನ ಹರಿವು ನಿಯಂತ್ರಿಸುವ ತಾಂತ್ರಿಕತೆ ಭಾರತ ಹೊಂದಲಿದೆ’ ಎಂದು ಠಕ್ಕರ್‌ ಹೇಳಿದ್ದಾರೆ. ‘ಪಾಕಿಸ್ತಾನಕ್ಕೆ ನೀರಿನ ಹರಿವು ತಡೆಯಲು ಅಗತ್ಯವಿರುವ ಪ್ರಮುಖ ಮೂಲಸೌಕರ್ಯ ನಮ್ಮಲ್ಲಿ ಇಲ್ಲ’ ಎಂದು ಮಂಥನ ಅಧ್ಯಯನ ಕೇಂದ್ರದ ಸ್ಥಾಪಕ ಹಾಗೂ ಪರಿಸರ ಹೋರಾಟಗಾರ ಶ್ರೀಪಾದ ಧರ್ಮಾಧಿಕಾರಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.