ADVERTISEMENT

ಯುದ್ಧನೌಕೆ ಐಎನ್‌ಎಸ್‌ ಮಹೇಂದ್ರಗಿರಿ ಸೆ. 1 ರಂದು ನೌಕಾದಳಕ್ಕೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2023, 14:14 IST
Last Updated 30 ಆಗಸ್ಟ್ 2023, 14:14 IST
   

ನವದೆಹಲಿ: ಅತ್ಯಾಧುನಿಕ ಯುದ್ಧನೌಕೆ ಐಎನ್‌ಎಸ್‌ ಮಹೇಂದ್ರಗಿರಿ ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಮುಂಬೈನ ಮಝ್‌ಗಾಂವ್‌ನಲ್ಲಿರುವ ಹಡಗು ತಯಾರಿಕಾ ಘಟಕದಿಂದ ಸೆ. 1ರಂದು ದೇಶದ ನೌಕಾದಳವನ್ನು ಸೇರಲಿದೆ.

ಈ ವಿಷಯವನ್ನು ರಕ್ಷಣಾ ಮಂತ್ರಾಲಯ ಬುಧವಾರ ಹೇಳಿದೆ.

ಒಡಿಶಾದ ಪೂರ್ವ ಘಟ್ಟ ಪ್ರದೇಶದ ಎತ್ತರದ ಪರ್ವತ ‘ಮಹೇಂದ್ರಗಿರಿ’ಯ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. 17ಎ ಯುದ್ಧನೌಕೆಯ ಯೋಜನೆಯ ಏಳನೇ ಹಡಗು ಇದಾಗಿದೆ. ಶಿವಾಲಿಕ್ ಶ್ರೇಣಿಯ ಯುದ್ಧನೌಕೆಯ ಮುಂದುವರಿದ ಭಾಗವೇ ಮಹೇಂದ್ರಗಿರಿ.

ADVERTISEMENT

ರಹಸ್ಯ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇದರಲ್ಲಿ ಅಳವಡಿಸಬಹುದಾಗಿದೆ. ಜತೆಗೆ ಸೆನ್ಸರ್‌ಗಳು ಹಾಗೂ ಆಧುನಿಕ ನಿರ್ವಹಣಾ ಸೌಕರ್ಯಗಳನ್ನು ಮಹೇಂದ್ರಗಿರಿ ಹೊಂದಿದೆ.

‘ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮಹೇಂದ್ರಗಿರಿ ಮೂಲಕ ಭಾರತ ತನ್ನ ನೌಕೆ ಅಭಿವೃದ್ಧಿಪಡಿಸುವ ಶ್ರೀಮಂತ ಪರಂಪರೆಯನ್ನು ಮುಂದುವರಿಸಿದೆ. ಆ ಮೂಲಕ ಭವಿಷ್ಯದಲ್ಲಿ ಸ್ವದೇಶಿ ನಿರ್ಮಿತ ಯುದ್ಧ ಹಡಗು ನಿರ್ಮಾಣದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಂತಾಗಿದೆ’ ಎಂದು ರಕ್ಷಣಾ ಮಂತ್ರಾಲಯ ಹೇಳಿದೆ.

17ಎ ಯೋಜನೆಯಡಿ ಮೇ. ಎಂಡಿಎಲ್‌ ಮೂಲಕ 4 ಹಡಗುಗಳು ಹಾಗೂ ಮೇ. ಜಿಆರ್‌ಎಸ್‌ಇ ಮೂಲಕ ಮೂರು ಹಡಗುಗಳು ನಿರ್ಮಾಣಗೊಂಡಿವೆ. ಇದರಲ್ಲಿ 2019–2023ರೊಳಗೆ ಒಟ್ಟು ಆರು ಹಡಗುಗಳು ಈ ಕಂಪನಿಗಳ ಮೂಲಕ ಲೋಕಾರ್ಪಣೆಗೊಂಡಿವೆ.

ಮಂತ್ರಾಲಯದ ಪ್ರಕಾರ, 17ಎ ಯೋಜನೆಯ ಹಡಗುಗಳು ಭಾರತೀಯ ನೌಕದಾಳದ ಯುದ್ಧನೌಕೆ ವಿನ್ಯಾಸ ವಿಭಾಗದ ಮೂಲಕ ಅಭಿವೃದ್ಧಿಗೊಂಡಿವೆ. ಈ ಯೋಜನೆ ಮೂಲಕ ಶೇ 75ರಷ್ಟು ಹಡಗುಗಳ ನಿರ್ಮಾಣ ಆತ್ಮನಿರ್ಭರ ಭಾರತದ ಯೋಜನೆ ಮೂಲಕವೇ ಸಿದ್ಧಗೊಳ್ಳುತ್ತಿದೆ. ಇದರಿಂದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಸ್ವದೇಶಿ ಕೈಗಾರಿಕೆಗಳಿಗೆ ಹೆಚ್ಚಿನ ಕೆಲಸ ಸಿಗುತ್ತಿದೆ ಎಂದು ಮಂತ್ರಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.