ADVERTISEMENT

ಅಂತರ್ಜಾತಿ ವಿವಾಹದಿಂದ ಸಾಮಾಜಿಕ ಉದ್ವಿಗ್ನತೆ ದೂರವಾಗುತ್ತದೆ: ಸುಪ್ರೀಂ ಕೋರ್ಟ್

ಪಿಟಿಐ
Published 12 ಫೆಬ್ರುವರಿ 2021, 15:29 IST
Last Updated 12 ಫೆಬ್ರುವರಿ 2021, 15:29 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅಂತರ್ಜಾತಿ ವಿವಾಹಗಳು ಜಾತಿ ಮತ್ತು ಸಮುದಾಯದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ ಎಂದಿರುವ ಸುಪ್ರೀಂ ಕೋರ್ಟ್, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಮತ್ತು ಯುವತಿಯರು ತಮ್ಮಿಷ್ಟದ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ ಹಿಂದಿನ ಸಾಮಾಜಿಕ ಕಟ್ಟುಪಾಡುಗಳಿಂದ ಹೊರತಾಗಿದ್ದಾರೆ ಎಂದು ಹೇಳಿದೆ.

ಯುವಕರು ಹಿರಿಯರಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ನ್ಯಾಯಾಲಯಗಳು ಇಂತಹ ಯುವಕರ ನೆರವಿಗೆ ಬರುತ್ತಿವೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ತನಿಖಾ ಅಧಿಕಾರಿಗಳಿಗೆ (ಐಒ) ಸಲಹೆ ನೀಡುವುದು ಮತ್ತು ಸಾಮಾಜಿಕವಾಗಿ ಸೂಕ್ಷ್ಮವಾಗಿರುವ ಇಂತಹ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕೆಲವು ಮಾರ್ಗಸೂಚಿಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೀಡುವುದು ಪೊಲೀಸ್ ಅಧಿಕಾರಿಗಳಿಗಿರುವ ಮುಂದಿನ ದಾರಿಯಾಗಿದೆ ಎಂದುಕೋರ್ಟ್ ಹೇಳಿದೆ.

ADVERTISEMENT

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ ರಾಯ್ ಅವರಿದ್ದ ನ್ಯಾಯಪೀಠವು ಈ ಹೇಳಿಕೆ ನೀಡಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯರ ಇಚ್ಛೆಗೆ ವಿರುದ್ಧವಾಗಿ ತನ್ನ ಆಯ್ಕೆಯ ಹುಡುಗನನ್ನು ಮದುವೆಯಾದ ಯುವತಿಯ ಪೋಷಕರು ಸಲ್ಲಿಸಿದ್ದ ಎಫ್‌ಐಆರ್ ಅನ್ನು ರದ್ದುಪಡಿಸಿದೆ.

ಉನ್ನತ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ, ಹುಡುಗಿಯ ಪೋಷಕರು ಈ ಮದುವೆಯನ್ನು ಸ್ವೀಕರಿಸಲು ಮತ್ತು ಅವಳೊಂದಿಗೆ ಮಾತ್ರವಲ್ಲದೆ ಆಕೆಯ ಪತಿಯೊಂದಿಗೂ ಉತ್ತಮ ಸಾಮಾಜಿಕ ಸಂಬಂಧವನ್ನು ಪುನಃ ಸ್ಥಾಪಿಸಲು ಉತ್ತಮ ಪ್ರಜ್ಞೆಯನ್ನು ಹೊಂದುವಂತಾಗಲಿ ಎಂದು ಆಶಿಸುತ್ತಿದೆ ಎಂದು ಹೇಳಿತ್ತು.

ನಮ್ಮ ದೃಷ್ಟಿಯಲ್ಲಿ, 'ಮಗಳನ್ನು ಮತ್ತು ಅಳಿಯನನ್ನು ದೂರವಿರಿಸಲು ಜಾತಿ ಮತ್ತು ಸಮುದಾಯದ ಹೆಸರಿನಡಿಯಲ್ಲಿ ಈ ವಿಚಾರವನ್ನು ತರುವುದು ಸಾಮಾಜಿಕ ನ್ಯಾಯದಡಿಯಲ್ಲಿ ಒಪ್ಪಲು ಸಾಧ್ಯವಿಲ್ಲ' ಎಂದು ನ್ಯಾಯಪೀಠ ಬಾಲಕಿಯ ಪೋಷಕರಿಗೆ ತಿಳಿಸಿದೆ. ಅಲ್ಲದೆ ಆಕೆ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದೆ.

'ವಿದ್ಯಾವಂತ ಯುವಕರು ಮತ್ತು ಯುವತಿಯರು ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ಇದು ಜಾತಿ ಮತ್ತು ಸಮುದಾಯವೇ ಪ್ರಮುಖ ಪಾತ್ರ ವಹಿಸುತ್ತಿದ್ದ ಹಿಂದಿನಿಂದ ಸಮಾಜದಲ್ಲಿದ್ದ ರೂಢಿಗಳಿಂದ ಸದ್ಯಕ್ಕೆ ಮುಕ್ತವಾಗಿದೆ. ಬಹುಶಃ, ಅಂತಹ ಅಂತರ್ಜಾತಿಯ ವಿವಾಹದಿಂದಾಗಿಯೇ ಜಾತಿ ಮತ್ತು ಸಮುದಾಯದ ಉದ್ವಿಗ್ನತೆ ಕಡಿಮೆಯಾಗಬಹುದು. ಆದರೆ ಈ ಮಧ್ಯೆ ಇಂತಹ ಯುವಕರು ತಮ್ಮ ಹಿರಿಯರಿಂದ ಬೆದರಿಕೆಗಳನ್ನು ಎದುರಿಸುತ್ತಾರೆ ಮತ್ತು ನ್ಯಾಯಾಲಯಗಳು ಈ ಯುವಕರ ನೆರವಿಗೆ ಬರುತ್ತಿವೆ' ಎಂದು ನ್ಯಾಯಾಲಯ ತಿಳಿಸಿದೆ.

ಉನ್ನತ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ಇಬ್ಬರು ವಯಸ್ಕ ವ್ಯಕ್ತಿಗಳು ವಿವಾಹಕ್ಕೆ ತಮ್ಮಿಚ್ಛೆಯಂತೆ ಒಪ್ಪಿಕೊಂಡ ನಂತರ ಕುಟುಂಬ, ಸಮುದಾಯದ ಅಥವಾ ಕುಲದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ಮತ್ತು ಅವರ ಒಪ್ಪಿಗೆಗೆ ಧರ್ಮನಿಷ್ಠೆಯಿಂದ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.