ADVERTISEMENT

ಮಧ್ಯಂತರ ಬಜೆಟ್‌ನಲ್ಲಿ ನೀವು ಏನೆಲ್ಲ ನಿರೀಕ್ಷಿಸಬಹುದು?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರದಿಂದ ಮತದಾರರ ಓಲೈಕೆ ಸಾಧ್ಯತೆ

ಗಣಪತಿ ಶರ್ಮಾ
Published 31 ಜನವರಿ 2019, 15:17 IST
Last Updated 31 ಜನವರಿ 2019, 15:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಶುಕ್ರವಾರ ಮಂಡನೆಯಾಗಲಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ವಿನಾಯಿತಿ ಮಿತಿ, ಸೆಕ್ಷನ್ 80ಸಿ ಅಡಿಯಲ್ಲಿ ಪಡೆಯಬಹುದಾದ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಬೆಳೆ ವಿಮೆಯ ಕಂತು ಮನ್ನಾ, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ರೈತರ ಬಡ್ಡಿ ಮನ್ನಾ, ಕಾರ್ಪೊರೇಟ್ ತೆರಿಗೆ ದರ ಕಡಿತ, ಸಣ್ಣ ಮತ್ತುಮಧ್ಯಮ ವರ್ಗದ ಉದ್ದಿಮೆದಾರರಿಗೆ ತೆರಿಗೆ ವಿನಾಯ್ತಿ... ಹೀಗೆ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ಈ ಬಾರಿ ವ್ಯಕ್ತವಾಗುತ್ತಿದೆ.

ಕೇಂದ್ರ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆಯೇ ಅಥವಾ ಮಧ್ಯಂತರ ಬಜೆಟ್ ಮಂಡಿಸುತ್ತದೆಯೇ ಎಂಬುದೂ ಇತ್ತೀಚಿನವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು. ಕೊನೆಗೂ ಆ ಬಗ್ಗೆ ಸ್ಪಷ್ಟನೆ ನೀಡಿದ್ದ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸುವುದಾಗಿ ದೃಢಪಡಿಸಿದೆ. ಸಾಮಾನ್ಯವಾಗಿ, ನಿರ್ಗಮಿಸುತ್ತಿರುವ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡುವುದು ಶಿಷ್ಟಾಚಾರ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವವರೆಗೂ ಅಗತ್ಯವಿರುವ ಯೋಜನೆಗಳು, ಅನುದಾನವನ್ನು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ. ಈ ಬಜೆಟ್‌ನಲ್ಲಿ ಯಾವುದೇ ದೊಡ್ಡ ಯೋಜನೆಗಳು, ಬೃಹತ್‌ ಮೊತ್ತದ ಅನುದಾನ, ಮಹತ್ವದ ನಿರ್ಧಾರಗಳನ್ನು ಘೋಷಿಸುವುದು ಕಡಿಮೆ. ಆದರೆ ಪೂರ್ಣ ಪ್ರಮಾಣದ ಯೋಜನೆಗಳನ್ನು, ಪ್ರಮುಖ ನಿರ್ಧಾರಗಳನ್ನು ಘೋಷಿಸಬಾರದು ಎಂಬ ಯಾವ ನಿಯಮವೂ ಕಾನೂನೂ ಅಸ್ತಿತ್ವದಲ್ಲಿಲ್ಲ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ, 2014–15ರಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿದ್ದ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ನಿವೃತ್ತ ಯೋಧರಿಗೆ‘ಒಂದು ಶ್ರೇಣಿ ಒಂದು ಪಿಂಚಣಿ’ ಯೋಜನೆ ಘೋಷಿಸಿದ್ದರು. ಈ ಯೋಜನೆಗೆ ಸುಮಾರು ₹500 ಕೋಟಿ ಅನುದಾನವನ್ನೂ ಪ್ರಕಟಿಸಿದ್ದರು. ಹೀಗಾಗಿ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಮಧ್ಯಮ ವರ್ಗದವರು ಏನೆಲ್ಲ ನಿರೀಕ್ಷಿಸಬಹುದು?

* 2014–15ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹2 ಲಕ್ಷದಿಂದ ₹2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿ₹2.5 ಲಕ್ಷದಿಂದ ₹3 ಲಕ್ಷ ಅಥವಾ ₹5 ಲಕ್ಷಕ್ಕೆ ವಿಸ್ತರಿಸುವ ಸಾಧ್ಯತೆ ಇದೆ.

* ಸದ್ಯ ತೆರಿಗೆ ವ್ಯಾಪ್ತಿಯಲ್ಲಿ ಬರುವ ಆದಾಯದಲ್ಲಿ ₹1.5 ಲಕ್ಷದವರೆಗೆಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದಾಗಿದೆ. ಈ ಮಿತಿಯನ್ನು ₹2 ಲಕ್ಷ ಅಥವಾ 2.5 ಲಕ್ಷಕ್ಕೆ ವಿಸ್ತರಿಸುವ ನಿರೀಕ್ಷೆ ಇದೆ.

* ಆದಾಯ ತೆರಿಗೆ ದರಗಳಲ್ಲಿ ಕಡಿತ ಸಾಧ್ಯತೆ:ಪ್ರಸ್ತುತ ₹2.5 ಲಕ್ಷದಿಂದ ₹5 ಲಕ್ಷದವರೆಗೆ ಆದಾಯ ಗಳಿಸುವವರಿಗೆ ಶೆ 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ.₹5 ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಗಳಿಸುವವರಿಗೆ ಶೇ 20ರಷ್ಟು ಮತ್ತು ₹10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ದರಗಳಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಗರಿಷ್ಠ ಆದಾಯ ತೆರಿಗೆ ಪ್ರಮಾಣವನ್ನು ಶೇ 30ರ ಬದಲಾಗಿ ಶೇ 25ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.

ರೈತರಿಗೆ ಏನೇನು?

ಪ್ರತಿಪಕ್ಷಗಳು ರೈತರ ಸಾಲಮನ್ನಾ ಘೋಷಣೆ ಮಾಡಿ ಜನಪ್ರಿಯತೆ ಗಳಿಸುತ್ತಿರುವುದು ಮತ್ತು ಈಚೆಗೆ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲನಭವಿಸಿರುವುದು ಮೋದಿ ಸರ್ಕಾರವನ್ನು ಚಿಂತೆಗೀಡುಮಾಡಿದೆ. ಹೀಗಾಗಿ ರೈತರನ್ನು ಸೆಳೆಯಲು ಪರಿಹಾರ ಪ್ಯಾಕೇಜ್‌ ಸೇರಿದಂತೆ ಹಲವು ಯೋಜನೆಗಳ ಘೋಷಣೆ ನಿರೀಕ್ಷಿಸಲಾಗಿದೆ. ₹1 ಲಕ್ಷ ಕೋಟಿ ಮೊತ್ತದ ಕೃಷಿ ಪರಿಹಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

ಸಾಧ್ಯತೆಗಳು

* ಒಡಿಶಾ ಮತ್ತು ತೆಲಂಗಾಣದಲ್ಲಿ ಜಾರಿ ಮಾಡಿರುವಂತೆ ಕೃಷಿಕರಿಗೆ ಆದಾಯ ಬೆಂಬಲ ಯೋಜನೆ ಘೋಷಿಸುವುದು

* ರೈತರಿಗೆ ಬಡ್ಡಿರಹಿತ ಸಾಲ

* ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿ ವಿನಾಯಿತಿ ನೀಡುವುದು

* ಆಹಾರ ಬೆಳೆಗಳ ವಿಮಾ ಯೋಜನೆಗಳ ಕಂತನ್ನು ಮನ್ನಾ ಮಾಡುವುದು

* ಆಹಾರ ಉತ್ಪನ್ನಗಳ ಮೇಲಿನ ಸಬ್ಸಿಡಿಗಾಗಿ ₹1.8 ಲಕ್ಷ ಕೋಟಿ ಅನುದಾನ

ಉದ್ಯಮಿಗಳ ನಿರೀಕ್ಷೆ

ನಿರುದ್ಯೋಗ ಸಮಸ್ಯೆ, ಉದ್ಯಮ ವಲಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ.

* ಕಾರ್ಪೋರೇಟ್‌ ತೆರಿಗೆ ದರವನ್ನು ಶೇ 30 ರಿಂದ ಶೇ 25ಕ್ಕೆ ಇಳಿಸುವ ಸಾಧ್ಯತೆ

* ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಹೆಚ್ಚು ತೆರಿಗೆ ವಿನಾಯಿತಿ

*ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳಿಗೆ ಬಂಡವಾಳ ಒಳಹರಿವು ಹೆಚ್ಚಿಸುವುದು

*ಎಲೆಕ್ಟ್ರಿಕ್‌ ಮತ್ತು ಬ್ಯಾಟರಿ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ

ಏಂಜಲ್ ತೆರಿಗೆ ರದ್ದು?

ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್‌ಗಳು) ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಅಂತಹ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿದ ಬಂಡವಾಳಕ್ಕೆ ದೊರೆಯುವ ಲಾಭದ ಮೇಲಿನ ತೆರಿಗೆಯನ್ನು (ಏಂಜಲ್ ತೆರಿಗೆ) ಈ ಬಾರಿಯ ಬಜೆಟ್‌ನಲ್ಲಿ ರದ್ದುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈದ್ಯಕೀಯ ಮರುಪಾವತಿ ಮತ್ತು ಸಾರಿಗೆ ಭತ್ಯೆ

ಸುಮಾರು ₹40,000ದವರೆಗಿನ ವೈದ್ಯಕೀಯ ಮರುಪಾವತಿ ಮತ್ತು ಸಾರಿಗೆ ಭತ್ಯೆಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ 2018ರ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಆದರೆ, ನಂತರ ಆರೋಗ್ಯ ಮತ್ತು ಶಿಕ್ಷಣ ತೆರಿಗೆಯನ್ನು ಶೇ 3ರಿಂದ 4ಕ್ಕೆ ಹೆಚ್ಚಳ ಮಾಡಿದ್ದರಿಂದ ವೈದ್ಯಕೀಯ ಮರುಪಾವತಿ ಮತ್ತು ಸಾರಿಗೆ ಭತ್ಯೆಗೆ ತೆರಿಗೆ ವಿನಾಯಿತಿಯಡಿ ಕೆಲವು ಪ್ರಯೋಜನಗಳನ್ನು ಪಡೆಯುವುದಕ್ಕೆ ಅಡ್ಡಿಯಾಗಿತ್ತು. ಹೀಗಾಗಿಆ ಯೋಜನೆಯನ್ನು ಮರಳಿ ಜಾರಿ ಮಾಡಬೇಕೆಂದು ಭಾರತೀಯ ಕೈಗಾರಿಕಾ ಒಕ್ಕೂಟ ಈಗಾಗಲೇ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಬಗ್ಗೆ ಬಜೆಟ್‌ನಲ್ಲಿ ಗಮನಹರಿಸುವ ಸಾಧ್ಯತೆ ಇದೆ.

ಸುಲಭವಲ್ಲ

ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಜನಪರ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬಹುದೆಂಬ ನಿರೀಕ್ಷೆಗಳಿದ್ದರೂ ಅದು ಅಷ್ಟು ಸುಲಭವಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೆಚ್ಚಿರುವ ಸಾಲದ ಹೊರೆ, ವಿತ್ತೀಯ ಕೊರತೆಗಳು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಇತ್ತೀಚಿನ ವರದಿಯ ಪ್ರಕಾರ, ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಸಾಲದ ಮೊತ್ತ ₹97 ಲಕ್ಷ ಕೋಟಿ ಇದೆ. 2014ರ ಮಾರ್ಚ್‌ ಕೊನೆಯ ಬಳಿಕ ಸಾಲದ ಪ್ರಮಾಣ ಶೇ 59ರಷ್ಟು ಏರಿಕೆಯಾಗಿದೆ ಎಂಬುದು ತಿಳಿದುಬಂದಿದೆ.ಈ ಮಧ್ಯೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 3.3ರ ವಿತ್ತೀಯ ಕೊರತೆ ಗುರಿ ಸಾಧಿಸುವುದಾಗಿ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಈ ಗುರಿಯನ್ನು ಸರ್ಕಾರ ಸಾಧಿಸಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರೂ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸದ್ಯ ವಿತ್ತೀಯ ಕೊರತೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಶೇ 3.5ಕ್ಕೆ ತಲುಪಿದೆ ಎಂದು ಕೆಲವು ಮೂಲಗಳು ವರದಿ ಮಾಡಿವೆ. ಶೇ 3.3ರ ವಿತ್ತೀಯ ಕೊರತೆ ಗುರಿಯನ್ನು ಸಾಧಿಸದೇ ಹೋದಲ್ಲಿ ದೇಶದ ಆರ್ಥಕತೆಯು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.