ADVERTISEMENT

ಇಂಟರ್ನೆಟ್ ಸ್ಥಗಿತದಿಂದ ಪ್ರತಿ ಗಂಟೆಗೆ ₹ 2.45 ಕೋಟಿ ನಷ್ಟ: ಸಿಒಎಐ

ಸೆಲ್ಯುಲರ್ ಆಪರೇಟರ್ಸ್‌ ಆಫ್ ಇಂಡಿಯಾ ಮಾಹಿತಿ

ರಾಯಿಟರ್ಸ್
Published 28 ಡಿಸೆಂಬರ್ 2019, 7:09 IST
Last Updated 28 ಡಿಸೆಂಬರ್ 2019, 7:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಸರ್ಕಾರದ ಆದೇಶದ ಮೇರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಬೇಕಾದ ಸಂದರ್ಭದಲ್ಲೆಲ್ಲ ಮೊಬೈಲ್ ಸೇವಾ ಕಂಪನಿಗಳಿಗೆ ಪ್ರತಿ ಗಂಟೆಗೆ₹ 2.45 ಕೋಟಿ ನಷ್ಟವಾಗುತ್ತಿದೆ ಎಂದು ‘ಸೆಲ್ಯುಲರ್ ಆಪರೇಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ)’ ತಿಳಿಸಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ‍ಪ್ರತಿಭಟನೆಗಳ ಸಂದರ್ಭ ಇಂಟರ್ನೆಟ್ ಸ್ಥಗಿತಕ್ಕೆ ಸರ್ಕಾರ ನೀಡಿರುವ ಆದೇಶಗಳನ್ನು ಉಲ್ಲೇಖಿಸಿ ಈ ಅದು ಮಾಹಿತಿ ನೀಡಿದೆ.

ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರವು ಸಾವಿರಾರು ಪೊಲೀಸರನ್ನು ನಿಯೋಜಿಸಿದ್ದಲ್ಲದೆ ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ ಹಬ್ಬದಂತೆ ತಡೆಯಲು ದೇಶದ ಹಲವೆಡೆ ಇಂಟರ್ನೆಟ್ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಈ ಕ್ರಮಕ್ಕೆ ವಿರೋಧವೂ ವ್ಯಕ್ತವಾಗಿತ್ತು.

ಉತ್ತರ ಪ್ರದೇಶದ ಉತ್ತರ ಭಾಗದ 18 ಜಿಲ್ಲೆಗಳಲ್ಲಿ ಶುಕ್ರವಾರಇಂಟರ್ನೆಟ್ ಸ್ಥಗಿತಕ್ಕೆ ಸರ್ಕಾರ ಅದೇಶಿಸಿತ್ತು ಎಂದು ದೂರಸಂಪರ್ಕ ಉದ್ಯಮದ ಮೂಲಗಳು ತಿಳಿಸಿವೆ. ನವದೆಹಲಿಯ ಹೊರವಲಯಗಳಲ್ಲಿಯೂ ಡಿಸೆಂಬರ್ 28ರ ಬೆಳಿಗ್ಗಿನವರೆಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ದೊರೆಯುವುದಿಲ್ಲ ಎಂದು ಅಂತರ್ಜಾಲ ಸೇವಾಪೂರೈಕೆದಾರ ಸಂಸ್ಥೆಯೊಂದು ಶುಕ್ರವಾರ ಗ್ರಾಹಕರಿಗೆ ಸಂದೇಶ ಕಳುಹಿಸಿತ್ತು.

ADVERTISEMENT

ಭಾರತೀಯರು ಪ್ರತಿ ತಿಂಗಳು ಸ್ಮಾರ್ಟ್‌ಫೋನ್‌ಗಳಿಗೆ ಸರಾಸರಿ 9.8 ಗಿಗಾಬೈಟ್‌ ಡೇಟಾ ಬಳಸುತ್ತಿದ್ದು, ಇದು ವಿಶ್ವದಲ್ಲೇ ಹೆಚ್ಚು ಎಂದು ಸ್ವೀಡನ್‌ನ ಟೆಲಿಕಾಂ ಕಂಪನಿ ಎರಿಕ್ಸನ್‌ ತಿಳಿಸಿದೆ. ಸಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್‌ಬುಕ್, ಮೆಸೆಂಜರ್ ಮತ್ತು ವಾಟ್ಸ್‌ಆ್ಯಪ್‌ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

ಇಂಟರ್ನೆಟ್‌ ಸ್ಥಗಿತಗೊಳಿಸುವಿಕೆಯು ಮೊದಲ ಆದ್ಯತೆಯಾಗಿರಬಾರದು ಎಂದು ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ರಿಲಯನ್ಸ್‌ ಜಿಯೋ ಒಳಗೊಂಡ ಸಿಒಎಐ ಹೇಳಿದೆ.

‘2019ರ ಕೊನೆಯ ವೇಳೆಗೆ ನಮ್ಮ ಲೆಕ್ಕಾಚಾರದ ಪ್ರಕಾರ ಆನ್‌ಲೈನ್‌ ಚಟುವಟಿಕೆಗಳು ಹೆಚ್ಚಾಗಿದ್ದು, ಇಂಟರ್ನೆಟ್‌ ಸ್ಥಗಿತದಿಂದಪ್ರತಿ ಗಂಟೆಗೆ ಸುಮಾರು ₹ 2.45 ಕೋಟಿ ನಷ್ಟವಾಗುತ್ತಿದೆ’ ಎಂದುಸಿಒಎಐ ಪ್ರಧಾನ ನಿರ್ದೇಶಕ ರಾಜನ್ ಮ್ಯಾಥ್ಯೂಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.