ADVERTISEMENT

ಅಸಂಘಟಿತ ವಲಯದ ಕಾರ್ಮಿಕರಿಗೆ ನಿರುದ್ಯೋಗ ವಿಮೆ ಜಾರಿಗೊಳಿಸಿ: ಸಂಸತ್‌ ಸಮಿತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 21:06 IST
Last Updated 1 ಆಗಸ್ಟ್ 2020, 21:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪರಿಣಾಮದಿಂದಾಗಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಅವರಿಗೆ ಜೀವನೋಪಾಯವೇ ಇಲ್ಲದಾಗಿದೆ. ಈ ಕಾರಣದಿಂದಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ನಿರುದ್ಯೋಗ ವಿಮೆ ಜಾರಿಗೊಳಿಸಬೇಕು ಎಂದು ಸಂಸತ್‌ ಸಮಿತಿಯೊಂದು ಶಿಫಾರಸು ಮಾಡಿದೆ.

‘ಕೋವಿಡ್‌ ಕಾರಣದಿಂದಾಗಿ ಪ್ರಸ್ತುತ ಉಂಟಾಗಿರುವ ಕಾರ್ಮಿಕರ ಪರಿಸ್ಥಿತಿಗೆ ಇಂಥ ವಿಮೆ ಪರಿಹಾರವಾಗಲಿದೆ. ಮುಂದೆಯೂ ಇಂತಹ ಸ್ಥಿತಿ ಎದುರಾದ ಸಂದರ್ಭದಲ್ಲಿ ಕಾರ್ಮಿಕರಿಗೆ ರಕ್ಷಣೆ ದೊರೆಯಲಿದೆ’ ಎಂದು ಕಾರ್ಮಿಕರ ಕುರಿತಾಗಿ ಇರುವ ಸಂಸತ್‌ಸಮಿತಿಯ ಅಧ್ಯಕ್ಷರಾದ, ಬಿಜೆಡಿ ಸಂಸದ ಭರ್ತ್ರುಹರಿ ಮಹ್ತಾಬ್‌ ಅಭಿಪ್ರಾಯ ವ್ಯಕ್ತಪಡಿಸಿದರು. ‘ನಿರುದ್ಯೋಗ ವಿಮೆ ಇಲ್ಲದೇ ಇರುವುದು ಸಾಮಾಜಿಕ ಭದ್ರತೆ ಯೋಜನೆಗಳಲ್ಲಿರುವ ಅಂತರವನ್ನು ತೋರಿಸುತ್ತದೆ. ಹೀಗಾಗಿ ಸಾಮಾಜಿಕ ಭದ್ರತೆ ನಿಯಮಾವಳಿಗಳಲ್ಲಿ ‘ನಿರುದ್ಯೋಗ ವಿಮೆ’ ಸೇರ್ಪಡೆ ಸರ್ಕಾರದ ಅವಶ್ಯ ಕರ್ತವ್ಯವಾಗಿದೆ’ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

‘ಅಸಂಘಟಿತ ವಲಯದ ಕಾರ್ಮಿಕರು, ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರುಜೊತೆಗೆ ಕಟ್ಟಡ ಹಾಗೂ ಇತರೆ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಇಂಥ ವಿಮೆಯ ಜಾರಿ ಕುರಿತುಕಾರ್ಮಿಕರ ಎರಡನೇ ರಾಷ್ಟ್ರೀಯ ಸಮಿತಿಯು(ಎಸ್‌ಎನ್‌ಸಿಎಲ್‌) ಕೂಡಾ ಶಿಫಾರಸು ಮಾಡಿದೆ’ ಎಂದು ತಿಳಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಕಾಲದಲ್ಲೇ ಸಮಿತಿಯು ನಿರುದ್ಯೋಗ ವಿಮೆ ವಿಷಯಕ್ಕೆ ಮತ್ತೆ ಚುರುಕು ಮುಟ್ಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.