ADVERTISEMENT

ವಾದ್ರಾ ಜತೆಗೆ ಮೋದಿ ವಿರುದ್ಧವೂ ತನಿಖೆ ನಡೆಸಿ: ರಾಹುಲ್‌ ಸವಾಲು

ಪಿಟಿಐ
Published 13 ಮಾರ್ಚ್ 2019, 20:14 IST
Last Updated 13 ಮಾರ್ಚ್ 2019, 20:14 IST
ಚೆನ್ನೈನ ಸ್ಟೆಲ್ಲಾ ಮಾರಿಸ್‌ ಮಹಿಳಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ರಾಹುಲ್‌ ಸಂವಾದ ಪಿಟಿಐ ಚಿತ್ರ
ಚೆನ್ನೈನ ಸ್ಟೆಲ್ಲಾ ಮಾರಿಸ್‌ ಮಹಿಳಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ರಾಹುಲ್‌ ಸಂವಾದ ಪಿಟಿಐ ಚಿತ್ರ   

ಚೆನ್ನೈ: ಕೆಲವರನ್ನು ಮಾತ್ರ ಆಯ್ದು ಕಾನೂನನ್ನು ಅನ್ವಯ ಮಾಡಲು ಸಾಧ್ಯವಿಲ್ಲ. ತಮ್ಮ ಭಾವ ರಾಬರ್ಟ್‌ ವಾದ್ರಾ ವಿರುದ್ಧ ತನಿಖೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ, ಆದರೆ, ರಫೇಲ್‌ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ದೇಶದ ಆರ್ಥಿಕ ಪ್ರಗತಿಯು ದೇಶದಲ್ಲಿ ಇರುವ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ. ನಕಾರಾತ್ಮಕ ಮತ್ತು ಭೀತಿಯ ವಾತಾವರಣದಲ್ಲಿ ಆರ್ಥಿಕ ಪ್ರಗತಿಯನ್ನು ಯಾರೂ ನಿರೀಕ್ಷಿಸಲಾಗದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಈ ವಾತಾವರಣವನ್ನು ಬದಲಾಯಿಸುತ್ತೇವೆ, ಜನರಲ್ಲಿ ಸಂತೋಷ ಮೂಡಲಿದೆ ಮತ್ತು ಅವರು ಸಶಕ್ತಗೊಳ್ಳಲಿದ್ದಾರೆ ಎಂದು ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್‌ ಹೇಳಿದರು.

ADVERTISEMENT

ತಮ್ಮನ್ನು ‘ಸರ್‌’ ಎಂದು ಕರೆಯಬೇಡಿ, ‘ರಾಹುಲ್‌’ ಎಂದಷ್ಟೇ ಕರೆಯಿರಿ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಜತೆಗೆ ನಡೆಸಿದ ಅನೌಪಚಾರಿಕ ಮಾತುಕತೆಯಲ್ಲಿಯೂ ಅವರು ರಫೇಲ್‌ ಒಪ್ಪಂದದ ವಿಚಾರ ಪ್ರಸ್ತಾಪಿಸಿದರು. ‘ರಾಬರ್ಟ್‌ ವಾದ್ರಾ ವಿರುದ್ಧ ತನಿಖೆ ನಡೆಸಿ ಎಂದು ಹೇಳುವ ಮೊದಲ ವ್ಯಕ್ತಿ ನಾನೇ, ಆದರೆ, ರಫೇಲ್‌ ವಿಚಾರದಲ್ಲಿ ಮೋದಿ ಅವರನ್ನೂ ತನಿಖೆ ಮಾಡಿ’ ಎಂದರು.

ದೇಶದ ಪ್ರತಿ ಸಂಸ್ಥೆಯನ್ನೂ ವಶಕ್ಕೆ ಪಡೆದು ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ನಾಗಪುರದಿಂದ ನಿಯಂತ್ರಿಸುವ ಹುನ್ನಾರ ಬಿಜೆಪಿಯದ್ದು ಎಂದು ರಾಹುಲ್‌ ಆರೋಪಿಸಿದ್ದಾರೆ.

ಮಹಿಳೆಯರ ಬಗೆಗಿನ ಧೋರಣೆ ಬದಲಾಗುವವರೆಗೆ ಅಧಿಕಾರಸ್ಥಾನಗಳಿಗೆ ಮಹಿಳೆಯರು ಬರಲು ಸಾಧ್ಯವಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲು ಮಸೂದೆಯನ್ನು ಅಂಗೀಕರಿಸುವುದಾಗಿ ಅವರು ಹೇಳಿದರು.

‘ನೋಟು ರದ್ದತಿ ಬೆಂಲಿಸುತ್ತೀರಾ’ ಎಂದು ರಾಹುಲ್ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ಇಲ್ಲ’ ಎಂಬ ಉತ್ತರ ಬಂತು. ನೋಟು ರದ್ದತಿಯನ್ನು ಘೋಷಿಸುವ ಮೊದಲು ಮೋದಿ ಅವರು ನಿಮ್ಮ ಸಲಹೆ ಪಡೆಯಬೇಕಿತ್ತು ಎಂದು ಅವರು ಹೇಳಿದರು. ತಮಗೆ ಸವಾಲು ಎಸೆಯಿರಿ, ಇಕ್ಕಟ್ಟು ಆಗುವಂತಹ ಪ್ರಶ್ನೆಗಳನ್ನು ಕೇಳಿರಿ ಎಂದು ರಾಹುಲ್‌ ಹೇಳಿದರು. ಹೆಚ್ಚು ಜನರ ಮಧ್ಯೆ ನಿಂತು ಅವರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವನ್ನು ಮೋದಿ ತೋರಿಸುತ್ತಾರೆಯೇ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.