ADVERTISEMENT

30 ಒಪ್ಪಂದಗಳ ತನಿಖೆಗೆ ಸೂಚನೆ

‘ಪ್ರಜಾ ವೇದಿಕೆ’ ನೆಲಸಮ ಬಳಿಕ ಟಿಡಿಪಿ ನಾಯಕನಿಗೆ ಮತ್ತೆ ಆಘಾತ

ಏಜೆನ್ಸೀಸ್
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
ಚಂದ್ರಬಾಬು ನಾಯ್ಡು ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಲಾಗಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ಬುಧವಾರ ನೆಲಸಮಗೊಳಿಸಲಾಯಿತು
ಚಂದ್ರಬಾಬು ನಾಯ್ಡು ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಲಾಗಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ಬುಧವಾರ ನೆಲಸಮಗೊಳಿಸಲಾಯಿತು   

ಅಮರಾವತಿ: ಚಂದ್ರಬಾಬು ನಾಯ್ಡು ಅವರು ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ನೆಲಸಮಗೊಳಿಸಿದ ಬಳಿಕ, ಜಗನ್‌ ಮೋಹನ್‌ ರೆಡ್ಡಿ ಅವರ ಮುಂದಿನ ಗುರಿ ನಾಯ್ಡು ಅವರು ನೆಲೆಸಿರುವ ಬಾಡಿಗೆ ಮನೆಯೇ ಇರಬಹುದು ಎಂದು ನಿರೀಕ್ಷಿಸಲಾಗಿತ್ತು.

ಅತ್ತ ಪ್ರಜಾ ವೇದಿಕೆ ನೆಲಸಮಗೊಳ್ಳುತ್ತಿದ್ದರೆ, ಇತ್ತ ವಿದ್ಯುತ್‌ ಖರೀದಿ ಒಪ್ಪಂದವೂ ಸೇರಿದಂತೆ ನಾಯ್ಡು ಅವರ ಅವಧಿಯಲ್ಲಿ ಮಾಡಲಾಗಿರುವ 30 ಒಪ್ಪಂದಗಳ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸುವ ಮೂಲಕ ಜಗನ್‌ ಅವರು ಟಿಡಿಪಿ ಮುಖಂಡನಿಗೆ ಮತ್ತೆ ಆಘಾತ ನೀಡಿದರು. ಒಪ್ಪಂದಗಳ ತನಿಖೆಗಾಗಿ ಸಂಪುಟ ಉಪಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಬುಧವಾರ ಘೋಷಿಸಿದರು.

ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿದ್ಯುತ್‌ ಕ್ಷೇತ್ರದ ಸ್ಥಿತಿಗತಿಯ ಪರಿಶೀಲನೆ ನಡೆಸಿದ ಜಗನ್‌, ವಿದ್ಯುತ್‌ ಖರೀದಿ ಒಪ್ಪಂದವೊಂದೇ ರಾಜ್ಯದ ಬೊಕ್ಕಸಕ್ಕೆ ₹2,636 ಕೋಟಿ ನಷ್ಟ ಉಂಟುಮಾಡಿದೆ ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಗಳಿಗೆ ನೀಡಿರುವ ಹೆಚ್ಚುವರಿ ಹಣವನ್ನು ವಸೂಲು ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಸರ್ಕಾರದ ಸೂಚನೆಗೆ ಸ್ಪಂದಿಸದ ಕಂಪನಿಗಳ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಲಾಗುವುದು’ ಎಂದೂ ಅವರು ಹೇಳಿದರು.

ADVERTISEMENT

ಹಿಂದಿನ ಸರ್ಕಾರವು ಪವನ ಹಾಗೂ ಸೌರ ವಿದ್ಯುತ್ತನ್ನು ದುಬಾರಿ ಬೆಲೆಗೆ ಖರೀದಿಸಿದೆ ಎಂದು ಆರೋಪಿಸಿದ ಜಗನ್‌, ‘ಈ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ’ ಎಂದರು.

ಗೊಂದಲದಲ್ಲಿ ನಾಯ್ಡು

ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮಗೊಳಿಸುವ ಸರ್ಕಾರದಕ್ರಮದಿಂದ ವಿಚಲಿತರಾಗಿರುವ ಚಂದ್ರಬಾಬು ನಾಯ್ಡು,ಅವರು ತಾವು ನೆಲೆಸಿರುವ ಮನೆಯನ್ನು ಖಾಲಿ ಮಾಡಬೇಕೇ ಬೇಡವೇ ಎಂಬ ವಿಚಾರವಾಗಿ ಪಕ್ಷದ ಹಿರಿಯ ಮುಖಂಡರ ಜೊತೆ ಬುಧವಾರ ಚರ್ಚೆ ನಡೆಸಿದರು.

ಕಟ್ಟಡದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಸದ್ಯಕ್ಕೆ ಆ ಮನೆಯಲ್ಲೇ ಇರುವಂತೆ ಕೆಲವು ಮುಖಂಡರು ಸೂಚಿಸಿದರೆ, ಅಕ್ರಮ ಕಟ್ಟಡದಲ್ಲಿ ನೆಲೆಸುವುದರಿಂದ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಆದ್ದರಿಂದ ಮನೆ ಖಾಲಿಮಾಡಿ ಬೇರೆ ಯಾವುದಾದರೂ ಮನೆಯಲ್ಲಿ ನೆಲೆಸುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮಗೊಳಿಸಿರುವುದಕ್ಕೆ ಟಿಡಿಪಿ ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರದ ಮುಂದಿನ ನಡೆಗಳ ಬಗ್ಗೆ ಕಾಯ್ದು ನೋಡುವ ನೀತಿಯನ್ನು ಅನುಸರಿಸಿದೆ.

‘ಎರಡು ದಿನಗಳ ಕಾಲ ಅಧಿಕಾರಿಗಳ ಸಭೆ ನಡೆಸಲು ಬಳಸಿದ್ದ ಕಟ್ಟಡವನ್ನೇ ಅಕ್ರಮ ಕಟ್ಟಡ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಜನರ ಹಣದಿಂದ ನಿರ್ಮಿಸಿದ್ದ ಈ ಕಟ್ಟಡವನ್ನು ಅಷ್ಟೊಂದು ತರಾತುರಿಯಲ್ಲಿ ನೆಲಸಮಗೊಳಿಸುವ ಅಗತ್ಯವೇನಿತ್ತು? ಸರ್ಕಾರದ ಈ ಕ್ರಮದಿಂದಾಗಿ ಸಭೆ ಸಮಾರಂಭಗಳನ್ನು ನಡೆಸಲು ಈ ಭಾಗದಲ್ಲಿ ದೊಡ್ಡ ಕಟ್ಟಡವೇ ಇಲ್ಲದಂತಾಗಿದೆ’ ಎಂದು ಟಿಡಿಪಿ ನಾಯಕ ಡಿ. ನರೇಂದ್ರ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.