ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ವಿಚಾರಣೆ: ಚಿದಂಬರಂ ಹಾಜರಾತಿಗೆ ವಿನಾಯಿತಿ

ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆ, ಏಪ್ರಿಲ್ 16ರಕ್ಕೆ ವಿಚಾರಣೆ ನಿಗದಿ

ಪಿಟಿಐ
Published 7 ಏಪ್ರಿಲ್ 2021, 7:58 IST
Last Updated 7 ಏಪ್ರಿಲ್ 2021, 7:58 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಅವರಿಗೆ ದೆಹಲಿ ನ್ಯಾಯಾಲಯ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ.

ಈ ಕುರಿತು ಚಿದಂಬರಂ ಮತ್ತು ಕಾರ್ತಿ ಪರ ವಕೀಲ ಆರ್ಷ್‌ದೀಪ್‌ ಸಿಂಗ್‌, ‘ತಮ್ಮ ಕಕ್ಷಿದಾರರು ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತಾರಾ ಪ್ರಚಾರಕರಾಗಿದ್ದಾರೆ. ಹಾಗಾಗಿ ಅವರಿಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು‘ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್, ಇಬ್ಬರಿಗೂ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿದ್ದಾರೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪೂರಕ ಚಾರ್ಜ್‌ ಶೀಟ್‌ಗೆ ಒಪ್ಪಿಗೆ ನೀಡಿದ ನಂತರ, ‌ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾರ್ಚ್ 24 ರಂದು ನೋಟಿಸ್ ನೀಡಲಾಗಿತ್ತು. ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 16 ಕ್ಕೆ ನಿಗದಿಪಡಿಸಿದೆ.

ಐಎನ್‌ಎಕ್ಸ್ ಮೀಡಿಯಾದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಆ.21ರಂದು ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2019 ರ ಅಕ್ಟೋಬರ್ 16ರಂದು ಇವರನ್ನು ಬಂಧಿಸಿತು. ಸಿಬಿಐ ಪ್ರಕರಣದಲ್ಲಿ ಅಕ್ಟೋಬರ್ 22 ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ2019ರ ಡಿ.4 ರಂದು ಚಿದಂಬರಂ ಜಾಮೀನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.