ADVERTISEMENT

ರಕ್ಷಣೆಗಾಗಿ ಚಿದಂಬರಂ ನ್ಯಾಯಾಂಗ ಹೋರಾಟ: ಅತ್ತ ಇ.ಡಿ.ಯಿಂದ ಲುಕ್‌ ಔಟ್‌ ನೋಟಿಸ್‌

ಏಜೆನ್ಸೀಸ್
Published 21 ಆಗಸ್ಟ್ 2019, 6:37 IST
Last Updated 21 ಆಗಸ್ಟ್ 2019, 6:37 IST
   

ನವದೆಹಲಿ: ‘ಐಎನ್‌ಎಕ್ಸ್‌ ಮೀಡಿಯ‘ ಹಗರಣದಲ್ಲಿ ಆರೋಪಿಯಾಗಿ, ಬಂಧನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಬಂಧನದಿಂದ ರಕ್ಷಣೆ ಕೋರಿ ಬುಧವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಸದ್ಯ ಅವರ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕಾಗಿದೆ.

ಮೊದಲಿಗೆ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿ ಚಿದಂಬರಂ ಅವರ ಪರ ವಕೀಲರಾದ ಕಪಿಲ್‌ ಸಿಬಲ್‌, ಸಲ್ಮಾನ್‌ ಖುರ್ಶಿದ್‌, ವಿವೇಕ್‌ ಟಂಕಾ ಅರ್ಜಿ ಸಲ್ಲಿಸಿದರು.

ADVERTISEMENT

ಅರ್ಜಿಯನ್ನು ನ್ಯಾಯಮೂರ್ತಿ ರಮಣ ಅವರು ಕೈಗೆತ್ತಿಕೊಂಡರು. ಆದರೆ, ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿರುವ ಅರ್ಜಿಗೆ ಸಿಬಿಐ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇದೊಂದು ಪ್ರಮುಖ ಪ್ರಕರಣ. ಹೀಗಾಗಿ ನ್ಯಾಯಾಲಯವು ಚಿದಂಬರಂಗೆ ರಕ್ಷಣೆ ನೀಡಬಾರದು ಎಂದು ಕೋರಿದರು.

ಹೀಗಾಗಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದೆದುರು ಸಲ್ಲಿಸುವಂತೆ ನ್ಯಾಯಮೂರ್ತಿ ರಮಣ ಅವರು ಚಿದಂಬರಂ ಪರ ವಕೀಲರಿಗೆ ಸೂಚಿಸಿದರು.

ಅದರಂತೆ ಚಿದಂಬರಂ ಪರ ವಕೀರಲು ಮುಖ್ಯನ್ಯಾಯಮೂರ್ತಿಗಳಿದ್ದ ಪೀಠದ ಅರ್ಜಿ ಸಲ್ಲಿಸಿದರಾದರೂ, ತುರ್ತು ವಿಚಾರಣೆ ಕೋರಲಿಲ್ಲ. ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಅಯೋಧ್ಯೆ ವ್ಯಾಜ್ಯಕ್ಕೆ ಸಂಬಂಧಿಸಿದ ಅರ್ಜಿಗಳ ನಿತ್ಯ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಮೂರ್ತಿಗಳುಳ್ಳ ಸಾಂವಿಧಾನಿಕ ಪೀಠದ ಮುಖ್ಯಸ್ಥರಾಗಿದ್ದಾರೆ. ಇಂದೂ ಅಯೋಧ್ಯೆ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಚಿದಂಬರಂ ವಕೀಲರು ತಮ್ಮ ಅರ್ಜಿಯಲ್ಲಿ ತುರ್ತು ವಿಚಾರಣೆಯ ಅಂಶವನ್ನು ಉಲ್ಲೇಖಿಸಲಿಲ್ಲ.

ಇ.ಡಿ ಲುಕ್‌ಔಟ್‌ ನೋಟಿಸ್‌

ಅತ್ತ ಚಿದಂಬರಂ ಅವರು ರಕ್ಷಣೆ ಕೋರಿ ನ್ಯಾಯಾಂಗ ಹೋರಾಟ ನಡೆಸುತ್ತಿರುವಾಗಲೇ ಇತ್ತ ‌ಜಾರಿ ನಿರ್ದೇಶನಾಲಯವು ಚಿದಂಬರಂಗಾಗಿ ಲುಕ್‌ಔಟ್‌ ನೋಟಿಸ್‌ ಹೊರಡಿಸಿದೆ.

ಇದಕ್ಕೂ ಮೊದಲು ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ದೆಹಲಿಯಲ್ಲಿರುವ ಚಿದಂಬರಂ ಅವರ ನಿವಾಸಕ್ಕೆ ಅನಿರೀಕ್ಷಿತವಾಗಿ ತೆರಳಿ, ಅಲ್ಲಿ ಕೆಲಹೊತ್ತು ಪರಿಶೀಲನೆಯನ್ನೂ ನಡೆಸಿದರು.

ಈ ಬಗ್ಗೆ ಪ್ರಕ್ರಿಯಿಸಿರುವ ಚಿದಂಬರಂ ಪರ ವಕೀಲ ಸಲ್ಮಾನ್‌ ಖುರ್ಶಿದ್‌ ‘ಇದು ಸರಿಯಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.