
ಕೋಲ್ಕತ್ತ: ರಾಜಕೀಯ ಸಲಹೆಗಾರ ಸಂಸ್ಥೆ ‘ಐ–ಪ್ಯಾಕ್’ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ ಯಾವುದೇ ಮಾಹಿತಿಯನ್ನು ವಶಕ್ಕೆ ಪಡೆದುಕೊಂಡಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಕೋಲ್ಕತ್ತ ಹೈಕೋರ್ಟ್‌ಗೆ ತಿಳಿಸಿತು.
ಜನವರಿ 8ರಂದು ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದಿರಬಹುದಾದ ವೈಯಕ್ತಿಕ ಮತ್ತು ರಾಜಕೀಯ ದತ್ತಾಂಶಗಳ ರಕ್ಷಣೆ ಕೋರಿ ಟಿಎಂಸಿ ಸಲ್ಲಿಸಿರುವ ಅರ್ಜಿಗೆ ಇ.ಡಿ ಪ್ರತಿಕ್ರಿಯಿಸಿತು.
ಟಿಎಂಸಿ ಪರ ವಾದ ಮಂಡಿಸಿದ ವಕೀಲರಾದ ಮೇನಕಾ ಗುರುಸ್ವಾಮಿ, ‘ಟಿಎಂಸಿ ತನ್ನ ದತ್ತಾಂಶ ರಕ್ಷಣೆಯನ್ನಷ್ಟೇ ಬಯಸುತ್ತದೆ’ ಎಂದರು.
ಇ.ಡಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ.ರಾಜು ಅವರು ಎರಡೂ ತಾಣಗಳಲ್ಲಿನ ದಾಳಿ ವೇಳೆ ಇ.ಡಿ ಏನನ್ನೂ ವಶಪಡಿಸಿಕೊಂಡಿಲ್ಲ. ಬದಲಿಗೆ, ಇ.ಡಿ ವಶಕ್ಕೆ ಪಡೆಯಬೇಕಿದ್ದ ಕಡತಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ತೆಗೆದುಕೊಂಡು ಹೋಗಿದ್ದಾರೆ’ ಎಂದು ವಿವರಿಸಿದರು. ಇ.ಡಿ ವಾದ ಆಲಿಸಿದ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ಟಿಎಂಸಿ ಅರ್ಜಿಯನ್ನು ವಿಲೇವಾರಿ ಮಾಡಿದರು.
ವಿಚಾರಣೆ ಮುಂದಕ್ಕೆ:
‘ಐ–ಪ್ಯಾಕ್’ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಬಂದು ಕಡತಗಳನ್ನು ವಶಕ್ಕೆ ಪಡೆದ ಘಟನೆ ಕುರಿತು ಸಿಬಿಐ ತನಿಖೆಗೆ ಕೋರಿ ಇ.ಡಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು.
ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಎರಡು ವಿಶೇಷ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅಲ್ಲಿ ವಿಚಾರಣೆ ನಡೆಯಬೇಕಿದೆ ಎಂದು ಎಎಸ್‌ಜಿ ಪೀಠದ ಗಮನಕ್ಕೆ ತಂದರು.
ಇ.ಡಿ ಮಾಡಿದ ಮನವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಕೀಲ ಕಲ್ಯಾಣ್ ಬ್ಯಾನರ್ಜಿ ಆಕ್ಷೇಪಿಸಿದರು. ಆದರೆ ನ್ಯಾಯಮೂರ್ತಿ ಸೌರವ್ ಘೋಷ್ ಅವರು ವಿಚಾರಣೆಯನ್ನು ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.