ADVERTISEMENT

ಪತ್ನಿಗೆ ಥಳಿತ: ಕರ್ತವ್ಯದಿಂದ ಐಪಿಎಸ್‌ ಅಧಿಕಾರಿ ಬಿಡುಗಡೆ

ಪಿಟಿಐ
Published 28 ಸೆಪ್ಟೆಂಬರ್ 2020, 18:18 IST
Last Updated 28 ಸೆಪ್ಟೆಂಬರ್ 2020, 18:18 IST
ಪ್ರಾತಿನಿಧಿಕ ಚಿತ್ರ. Credit: Pixabay Photo
ಪ್ರಾತಿನಿಧಿಕ ಚಿತ್ರ. Credit: Pixabay Photo   

ಭೋಪಾಲ್‌, ನವದೆಹಲಿ: ಪತ್ನಿಯನ್ನು ಥಳಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಹಿರಿಯ ಐಪಿಎಸ್‌ ಅಧಿಕಾರಿ ಪುರುಷೋತ್ತಮ್‌ ಶರ್ಮಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

1986ರ ಬ್ಯಾಚ್‌ನ ಪುರುಷೋತ್ತಮ ಅವರು, ಪ್ರಸ್ತುತ ಪಬ್ಲಿಕ್‌ ಪ್ರಾಸಿಕ್ಯೂಷನ್‌ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪುರುಷೋತ್ತಮ್‌ ಅವರು ಪತ್ನಿಯನ್ನು ಥಳಿಸುತ್ತಿರುವ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ADVERTISEMENT

‘ಜವಾಬ್ದಾರಿಯುತ ಸ್ಥಾನದಲ್ಲಿರುವವರೇಕಾನೂನು ಕೈಗೆತ್ತಿಕೊಂಡರೆ ಅದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚವ್ಹಾಣ್‌ ಸೋಮವಾರ ತಿಳಿಸಿದ್ದಾರೆ.

ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆಪುರುಷೋತ್ತಮ್‌ ಅವರು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪುರುಷೋತ್ತಮ್‌ ಅವರ ಪುತ್ರ, ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರೂ ಆಗಿರುವ ಪಾರ್ಥ ಅವರು ಗೃಹ ಸಚಿವ ನರೋತ್ತಮ್‌ ಮಿಶ್ರಾ ಹಾಗೂ ಕೆಲ ಹಿರಿಯ ಅಧಿಕಾರಿಗಳಿಗೆಈ ವಿಡಿಯೊ ಕಳಿಸಿ ತಂದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

‘ಪತ್ನಿಯು 12–15 ವರ್ಷಗಳಿಂದ ನಿರಂತರವಾಗಿ ನನ್ನಿಂದ ಹಣ ಪಡೆದು ವಿದೇಶ ಪ್ರವಾಸ ಕೈಗೊಳ್ಳುವುದಲ್ಲದೆ, ಅಲ್ಲಿ ಮೋಜು ಮಸ್ತಿ ಮಾಡಿ ಬರುತ್ತಾಳೆ. ನನ್ನ ಹಣದಿಂದ ಐಷಾರಾಮಿ ಬದುಕು ನಡೆಸುತ್ತಿದ್ದಾಳೆ’ ಎಂದು ಪುರುಷೋತ್ತಮ್‌ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಮಹಿಳಾ ಆಯೋಗದ ಪತ್ರ: ಪುರುಷೋತ್ತಮ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

‘ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.