ADVERTISEMENT

ಪಾಕಿಸ್ತಾನದತ್ತ ವಾಲಿದ ಇರಾನ್‌; ಭಾರತ ಆತಂಕ

ಚಬಹರ್‌ ಬಂದರಿಗೆ ಗ್ವಾದರ್‌ ಬಂದರು ಜೋಡಿಸುವ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:36 IST
Last Updated 27 ಮೇ 2019, 19:36 IST
   

ನವದೆಹಲಿ: ತನ್ನ ಆಯಕಟ್ಟಿನ ಆಗ್ನೇಯ ಕರಾವಳಿಯಲ್ಲಿ ಭಾರತ ಅಭಿವೃದ್ಧಿಪಡಿಸುತ್ತಿರುವ ಚಬಹರ್‌ ಬಂದರಿಗೆ ಪಾಕಿಸ್ತಾನದ ಗ್ವಾದರ್ ಬಂದರಿನ ಜತೆ ಸಂಪರ್ಕ ಕಲ್ಪಿಸಲು ಇರಾನ್‌ ಉದ್ದೇಶಿಸಿರುವುದು ಭಾರತದ ಪಾಲಿಗೆ ಕಳವಳಕಾರಿ ವಿದ್ಯಮಾನವಾಗಿದೆ.

ಇರಾನ್ ವಿರುದ್ಧ ಅಮೆರಿಕ ವಿಧಿಸಿದ ಆರ್ಥಿಕ ದಿಗ್ಬಂಧನ ಪಾಲಿಸಲು ಭಾರತ ಮುಂದಾಗಿದ್ದು, ಆ ದೇಶದಿಂದ ಕಚ್ಚಾ ತೈಲ ಖರೀದಿಯನ್ನು ಸ್ಥಗಿತಗೊಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ, ಇರಾನ್‌ ಪಾಕಿಸ್ತಾನದ ಎದುರು ಈ ಹೊಸ ಪ್ರಸ್ತಾವ ಮುಂದಿಟ್ಟಿದೆ. ಇರಾನ್‌ ವಿದೇಶ ಸಚಿವ ಜಾವದ್‌ ಝರೀಫ್‌ ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಈ ಪ್ರಸ್ತಾವ ಮಂಡಿಸಿದ್ದಾರೆ. ಪಾಕಿಸ್ತಾನದ ನೈರುತ್ಯ ಕರಾವಳಿಯಲ್ಲಿನ ಗ್ವಾದರ್‌ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ.

ಆಯಕಟ್ಟಿನ ಸ್ಥಳಗಳಲ್ಲಿ ಇರುವ ಈ ಎರಡೂ ಬಂದರುಗಳ ಮಧ್ಯೆ ಸಂಪರ್ಕ ಏರ್ಪಡುವುದರಿಂದ ಪಾಕಿಸ್ತಾನ ಮತ್ತು ಚೀನಾ ನಡುವಣ ವಾಣಿಜ್ಯ ಬಾಂಧವ್ಯ ಇನ್ನಷ್ಟು ಬಲಗೊಳ್ಳಲಿದೆ. ಚಬಹರ್‌ ಬಂದರನ್ನು ಚೀನಾದ ಮಹತ್ವಾಕಾಂಕ್ಷೆಯ ಆರ್ಥಿಕ ಕಾರಿಡಾರ್‌ ಯೋಜನೆಯಾದ ಬೆಲ್ಟ್ ಆ್ಯಂಡ್‌ ರೋಡ್‌ಗೆ (ಬಿಆರ್‌ಐ) ಜೋಡಿಸುವ ಸಾಧ್ಯತೆ ಇರುವುದು ಭಾರತದ ಆತಂಕ ಹೆಚ್ಚಿಸಿದೆ.

ADVERTISEMENT

ಭಾರತವು ಈಗಾಗಲೇ ‘ಬಿಆರ್‌ಐ’ ಯೋಜನೆಯಿಂದ ಅಂತರ ಕಾಯ್ದುಕೊಂಡಿದೆ. ಚೀನಾ ಮತ್ತು ಪಾಕಿಸ್ತಾನದ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯು ಚೀನಾದ ಕ್ಸಿಂಕ್ಸಿಯಾಂಗ್‌ ಮತ್ತು ಪಾಕಿಸ್ತಾನದ ಗ್ವಾದರ್‌ ಬಂದರಿಗೆ ಸಂಪರ್ಕ ಕಲ್ಪಿಸಲಿದೆ. ಈ ಕಾರಿಡಾರ್‌, ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿದೆ.

ಜಾವದ್‌ ಝರೀಫ್‌ ಅವರು ಈ ತಿಂಗಳ ಮಧ್ಯಭಾಗದಲ್ಲಿ ಭಾರತಕ್ಕೂ ಭೇಟಿ ನೀಡಿದ್ದರು. ಅಮೆರಿಕದ ನಿರ್ಬಂಧದ ಹೊರತಾಗಿಯೂ ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡಲು ಇರಾನ್‌ ಸಿದ್ಧವಿದೆ ಎಂದು ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಜತೆಗಿನ ಭೇಟಿ ಸಂದರ್ಭದಲ್ಲಿ ಚರ್ಚಿಸಿದ್ದರು. ಈ ಬಗ್ಗೆ ಭಾರತ ಯಾವುದೇ ಭರವಸೆ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.