ಇರಾನ್ ದಾಳಿ ಇಸ್ರೇಲ್‌ನಲ್ಲಿ ಹಾನಿಗೀಡಾದ ಕಟ್ಟಡಗಳು
ರಾಯಿಟರ್ಸ್ ಚಿತ್ರ
ನವದೆಹಲಿ: ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಶಮನಕ್ಕೆ ಭಾರತವು ತನ್ನ ಪಾತ್ರ ನಿರ್ವಹಿಸಲು ಸಿದ್ಧವಿದೆ ಎಂದು ಭಾರತ ಮಂಗಳವಾರ ಹೇಳಿದೆ
ಇರಾನ್ –ಇಸ್ರೇಲ್ ನಡುವಿನ ಕದನ ವಿರಾಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
‘ನಾವು ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ, ಅಲ್ಲದೆ ಅಮೆರಿಕ, ಇರಾನ್ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ಪ್ರತಿದಾಳಿ ನಡೆಸಿರುವುದನ್ನು ಗಮನಿಸಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಉದ್ವಗ್ನತೆಯ ಬಗ್ಗೆ ಕಳವಳವಿದೆ. ಈ ನಡುವೆ ಇರಾನ್–ಇಸ್ರೇಲ್ ಕದನವಿರಾಮಕ್ಕೆ ಒಪ್ಪಿಕೊಂಡಿರುವುದನ್ನು ಹಾಗೂ ಕದನ ವಿರಾಮ ಸ್ಥಾಪಿಸಲು ಅಮೆರಿಕ ಮತ್ತು ಕತಾರ್ ಪಾತ್ರವಹಿಸಿರುವುದನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದೆ.
‘ಈ ಪ್ರದೇಶದಲ್ಲಿನ ಸಂಘರ್ಷಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಸೂತ್ರವಾಗಿದೆಯೇ ಹೊರತು ಪರ್ಯಾಯ ಆಯ್ಕೆಯಿಲ್ಲ ಎಂದು ಪುನರುಚ್ಚರಿಸಲು ಬಯಸುತ್ತೇವೆ. ಈ ಪ್ರಯತ್ನಕ್ಕೆ ಸಹಾಯ ಮಾಡಲು ಭಾರತ ಸಿದ್ಧವಿದೆ. ಅಲ್ಲದೆ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಲಿವೆ ಎನ್ನುವ ಭರವಸೆಯಿದೆ’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಎರಡು ದಿನಗಳ ಬಳಿಕ ವಿದೇಶಾಂಗ ಸಚಿವಾಲಯ ಈ ಪ್ರಕಟಣೆ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.