ADVERTISEMENT

ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ?

ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಯಲಿ: ತರೂರ್‌

ಪಿಟಿಐ
Published 20 ಫೆಬ್ರುವರಿ 2020, 19:45 IST
Last Updated 20 ಫೆಬ್ರುವರಿ 2020, 19:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಅವರೇ ಮತ್ತೆ ಆಯ್ಕೆಯಾಗುವುದು ಬಹುತೇಕ ನಿಚ್ಚಳವಾಗಿದೆ.

‘ರಾಹುಲ್‌ ಅವರು ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾಗುವುದು ಖಚಿತ. ಪಕ್ಷದ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ರಾಹುಲ್‌ ಅವರೇ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿದ್ದಾರೆ. ಅವರೊಬ್ಬರೇ ಅಭ್ಯರ್ಥಿಯಾಗುವುದರಿಂದ ಚುನಾವಣೆ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ನಲ್ಲಿ ನಡೆಯಲಿರುವ ಪಕ್ಷದ ಅಧಿವೇಶನದಲ್ಲಿ ರಾಹುಲ್‌ ಗಾಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ನಿರೀಕ್ಷೆ ಇದೆ.

ADVERTISEMENT

ಚುನಾವಣೆ ನಡೆಯಲಿ: ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಹಾಗೂ ಮತದಾರರಿಗೆ ಸ್ಫೂರ್ತಿ ನೀಡಲು ಪಕ್ಷದ ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಸಂಸದ ಶಶಿ ತರೂರ್‌ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು ಒತ್ತಾಯಿಸಿದ್ದಾರೆ.

‘ನಾಯಕತ್ವ ಸ್ಥಾನಕ್ಕೆ ಆಯ್ಕೆ ನಡೆಯದಿರುವುದೇ ಪಕ್ಷ ಎದುರಿಸುವ ಪ್ರಮುಖ ಸವಾಲು’ ಎಂದು ಈಚೆಗೆ ಕಾಂಗ್ರೆಸ್‌ನ ಮಾಜಿ ಸಂಸದ ಸಂದೀಪ್‌ ದೀಕ್ಷಿತ್‌ ಹೇಳಿದ್ದರು. ಇದಕ್ಕೆ ಬೆಂಬಲ ಸೂಚಿಸಿ ತರೂರ್‌ ಅವರು ಪಕ್ಷಕ್ಕೆ ಮನವಿ ಮಾಡಿದ್ದಾರೆ.

‘ಸಂದೀಪ್‌ ಅವರು ಬಹಿರಂಗವಾಗಿ ಹೇಳಿರುವ ವಿಚಾರವನ್ನೇ ದೇಶದಾದ್ಯಂತ ಪಕ್ಷದ ಹಲವು ನಾಯಕರು ಖಾಸಗಿಯಾಗಿ ಹೇಳುತ್ತಿದ್ದಾರೆ. ಇವರಲ್ಲಿ ಹಲವರು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವರು’ ಎಂದು ತರೂರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಹುಡುಕುವಲ್ಲಿ ಹಿರಿಯ ನಾಯಕರು ವಿಫಲರಾಗಿದ್ದಾರೆ ಎಂದೂ ಸಂದೀಪ್‌ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ, ‘ಅಧ್ಯಕ್ಷ ಸ್ಥಾನದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ಸಿಡಬ್ಲ್ಯೂಸಿಯ ನಿರ್ಣಯಗಳನ್ನು ಓದಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.