ADVERTISEMENT

ದೇಶದಲ್ಲಿ ಸೇತುವೆ, ರೈಲು ಹಳಿಗಳನ್ನು ಸ್ಫೋಟಿಸಿ ಭಾರೀ ಪ್ರಾಣಹಾನಿಗೆ ಉಗ್ರರ ಸಂಚು

ಐಎಎನ್ಎಸ್
Published 16 ಸೆಪ್ಟೆಂಬರ್ 2021, 15:03 IST
Last Updated 16 ಸೆಪ್ಟೆಂಬರ್ 2021, 15:03 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: ದೆಹಲಿ ಪೊಲೀಸರು ಬಂಧಿಸಿರುವ ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ)ನಿಂದ ತರಬೇತಿ ಪಡೆದಿರುವ ಇಬ್ಬರು ಭಯೋತ್ಪಾದಕರು, ಸೇತುವೆಗಳು ಮತ್ತು ರೈಲ್ವೆ ಹಳಿಗಳನ್ನು ಸ್ಫೋಟಿಸುವ ಮೂಲಕ ದೇಶದಲ್ಲಿ ಭಾರೀ ಪ್ರಾಣಹಾನಿ ಉಂಟು ಮಾಡುವ ಸಂಚು ರೂಪಿಸಿದ್ದ ಮಾಹಿತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತಟ್ಟಾದಲ್ಲಿ ಐಎಸ್ಐನಿಂದ ತರಬೇತಿ ಪಡೆದಿರುವ ಈ ಇಬ್ಬರು (ಒಸಾಮಾ ಮತ್ತು ಜೀಶನ್) ಭಯೋತ್ಪಾದಕರಿಗೆ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಪ್ರಯಾಣಿಸುವ ರೈಲುಗಳ ಸಮಯ ಮತ್ತು ಮಾರ್ಗದ ವಿವರಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿತ್ತು.

ದೆಹಲಿ ಪೊಲೀಸರು ಇವರನ್ನು ಸೆರೆ ಹಿಡಿದಾಗ ಅವರಿಂದ 1.5 ಕೆಜಿ ಆರ್‌ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದ ವಿನಾಶವನ್ನು ಉಂಟುಮಾಡಲು ಇಷ್ಟು ಪ್ರಮಾಣದ ಆರ್‌ಡಿಎಕ್ಸ್ ಸಾಕು ಎಂದು ಮೂಲಗಳು ತಿಳಿಸಿವೆ.

ADVERTISEMENT

ಇತ್ತೀಚಿನ ವರದಿಗಳ ಪ್ರಕಾರ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ಪೋಲಿಸ್‌ನ ವಿಶೇಷ ದಳವು ಎಲ್ಲಾ ಶಂಕಿತ ಭಯೋತ್ಪಾದಕರನ್ನು ಜಂಟಿಯಾಗಿ ವಿಚಾರಣೆ ನಡೆಸುತ್ತಿವೆ. ಡಿ ಕಂಪನಿಯ ಶಂಕಿತ ಭಯೋತ್ಪಾದಕ ಜಾನ್ ಮೊಹಮ್ಮದ್ ಮೇಲೆ ಪೊಲೀಸರು ವಿಶೇಷ ಗಮನಹರಿಸುತ್ತಿದ್ದಾರೆ.

ಬಂಧಿತ ಶಂಕಿತ ಉಗ್ರ ಜಾನ್ ಮೊಹಮ್ಮದ್ ಮುಂಬೈನ ಧಾರಾವಿಯ ಮೂಲದವನು ಎಂದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ವಿನೀತ್ ಅಗರ್‌ವಾಲ್ ಹೇಳಿದ್ದಾರೆ.

ಉಗ್ರ ಒಸಾಮಾ ತಂದೆ ಹುಮೈದ್-ಉರ್-ರೆಹಮಾನ್‌ನನ್ನು ಸಹ ಪೊಲೀಸರು ಹುಡುಕುತ್ತಿದ್ದಾರೆ. ಅವನೇ ಭಯೋತ್ಪಾದಕ ಕೃತ್ಯದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಒಸಾಮಾ ಮತ್ತು ಉತ್ತರ ಪ್ರದೇಶದ ಅಲಹಾಬಾದ್ ನಿವಾಸಿ ಜೀಶನ್‌ನನ್ನು ಹುಮೈದ್‌, ಪಾಕಿಸ್ತಾನದಲ್ಲಿ ತರಬೇತಿ ಪಡೆಯುವ ಉದ್ದೇಶದಿಂದ ಮಸ್ಕತ್‌ಗೆ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಮಸ್ಕತ್‌ಗೆ ತಲುಪಿದ ನಂತರ, ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಅವರನ್ನು ಸ್ಫೋಟಕಗಳು ಮತ್ತು ಬಾಂಬ್‌ ತಯಾರಿಸುವ ತರಬೇತಿ ಪಡೆಯಲು ಸಮುದ್ರ ಮಾರ್ಗಗಳ ಮೂಲಕ ಗ್ವಾದರ್ ಬಂದರಿಗೆ ಕರೆದುಕೊಂಡು ಹೋಗಿತ್ತು.

ಒಸಾಮ ಮತ್ತು ಜೀಶನ್ ಕಮಾರ್ ಅವರಿಗೆ ಸಿಂಧ್ ಪ್ರಾಂತ್ಯದ ತಟ್ಟಾದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಬಾಂಬ್, ಐಇಡಿ ತಯಾರಿಕೆ ಮತ್ತು ದೈನಂದಿನ ಬಳಕೆಯ ವಸ್ತುಗಳಿಂದ ಬೆಂಕಿ ಹಚ್ಚುವ ತರಬೇತಿಯನ್ನು ನೀಡಲಾಗಿತ್ತು.

ಆ ತೋಟದ ಮನೆಯಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳಿದ್ದರು. ಜಬ್ಬಾರ್ ಮತ್ತು ಹಮ್ಜಾ ಎಂಬ ಇಬ್ಬರು ಇವರಿಗೆ ತರಬೇತಿ ನೀಡಿದ್ದಾರೆ. ಅವರಿಬ್ಬರೂ ಸೇನಾ ಸಮವಸ್ತ್ರ ಧರಿಸಿದ್ದರಿಂದ ಅವರು ಪಾಕ್ ಸೇನಾ ಸಿಬ್ಬಂದಿಯೇ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.