ಟೆಲ್ ಅವೀವ್: ತನ್ನ ಹಿಡಿತದಲ್ಲಿರುವ ವೆಸ್ಟ್‌ಬ್ಯಾಂಕ್‌ನಲ್ಲಿ ವಿವಾದಾಸ್ಪದ ವಸತಿ ಯೋಜನೆ ಜಾರಿಗೊಳಿಸಲು ಇಸ್ರೇಲ್ ಸರ್ಕಾರವು ಅನುಮತಿ ನೀಡಿದೆ. ಪ್ರಸ್ತಾವಿತ ಯೋಜನೆಯು ಈ ಪ್ರದೇಶವನ್ನು ಪರಿಣಾಮಕಾರಿಯಾಗಿ ಎರಡು ಭಾಗಗಳಾಗಿ ವಿಭಜಿಸಲಿದೆ. ಈ ನಿರ್ಧಾರವು ಭವಿಷ್ಯದಲ್ಲಿ ಪ್ಯಾಲೆಸ್ಟೀನ್ ರಾಜ್ಯದ ಭವಿಷ್ಯದ ನಿರ್ಧಾರವನ್ನೇ ನಾಶ ಮಾಡಲಿದೆ ಎಂದು ಪ್ಯಾಲೆಸ್ಟೀನ್‌ನ ಮಾನವ ಹಕ್ಕು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಜೆರುಸಲೇಂನ ಪೂರ್ವಕ್ಕೆ ತೆರೆದ ಭೂಪ್ರದೇಶವಾದ ‘ಇ–1’ನಲ್ಲಿ ವಸತಿ ಯೋಜನೆ ಜಾರಿಗೆ ತರಲು ಇಸ್ರೇಲ್ ಎರಡು ದಶಕಗಳಿಂದಲೂ ಪರಿಶೀಲನೆ ನಡೆಸುತ್ತಿತ್ತು. ಅಮೆರಿಕದ ಹಿಂದಿನ ಸರ್ಕಾರಗಳು ನಿರಂತರ ಒತ್ತಡ ಹೇರಿದ್ದರಿಂದ ಈ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಈ ಕುರಿತು ಆಕ್ಷೇಪ ಸಲ್ಲಿಸಿ ದಾಖಲಿಸಿದ್ದ ಕೊನೆಯ ಅರ್ಜಿಯು ಆಗಸ್ಟ್ 6ರಂದು ತಿರಸ್ಕೃತಗೊಂಡ ಬಳಿಕ ಯೋಜನೆ ಹಾಗೂ ಕಟ್ಟಡ ಸಮಿತಿಯು ಬುಧವಾರ ಅಂತಿಮ ಅನುಮೋದನೆಯನ್ನು ನೀಡಿದೆ.
ತಕ್ಷಣವೇ ಈ ಪ್ರಕ್ರಿಯೆಗಳು ಆರಂಭಗೊಂಡರೆ, ಮುಂದಿನ ಕೆಲವು ತಿಂಗಳಲ್ಲಿಯೇ ಮೂಲಸೌಕರ್ಯ ಕೆಲಸಗಳು ಆರಂಭಗೊಳ್ಳಲಿದ್ದು, ವರ್ಷದ ಒಳಗಾಗಿ ಮನೆ ನಿರ್ಮಾಣ ಕೆಲಸಗಳು ಶುರುವಾಗಲಿದೆ.
‘ಜೆರುಸಲೇಂನಿಂದ ಪೂರ್ವಭಾಗಕ್ಕೆ 7 ಕಿ.ಮೀ ದೂರದಲ್ಲಿರುವ ವೆಸ್ಟ್‌ಬ್ಯಾಂಕ್ ವ್ಯಾಪ್ತಿಯಲ್ಲಿರುವ ‘ಮಾಲೆ ಅಡುಮಿಂಮ್’ನ ವಿಸ್ತರಿತ ಜಾಗದಲ್ಲಿ ವಸತಿ ಯೋಜನೆ ಜಾರಿಯಾಗಲಿದ್ದು, ಇದರಲ್ಲಿ 3,500 ಅಪಾರ್ಟ್‌ಮೆಂಟ್ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮಾಟ್‌ರಿಜ್ ಅವರು ಕಳೆದ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಐರೋಪ್ಯ ರಾಷ್ಟ್ರಗಳು ಪ್ಯಾಲೆಸ್ಟೀನ್‌ನನ್ನು ರಾಜ್ಯವಾಗಿ ಪರಿಗಣಿಸುವ ಯೋಜನೆ ಘೋಷಿಸಿದ ಪ್ರತಿಯಾಗಿ ಸ್ಮಾಟ್‌ರಿಜ್ ಅವರು ಈ ಯೋಜನೆಯನ್ನು ಪ್ರಕಟಿಸಿದರು.
‘ಪ್ಯಾಲೆಸ್ಟೀನ್ ಅನ್ನು ರಾಜ್ಯವನ್ನಾಗಿ ಪರಿಗಣಿಸುವ ಯೋಜನೆಯನ್ನು ಶಾಶ್ವತವಾಗಿ ಸಮಾಧಿ ಮಾಡಲಾಗಿದೆ. ಏಕೆಂದರೆ ಗುರುತಿಸಲು ಯಾರೂ ಇಲ್ಲ, ಗುರುತಿಸಲು ಏನೂ ಇಲ್ಲ. ವಿಶ್ವದ ಯಾವುದೇ ರಾಷ್ಟ್ರವೂ ಕೂಡ ಪ್ಯಾಲೆಸ್ಟೀನ್ ಅನ್ನು ರಾಜ್ಯವನ್ನಾಗಿ ಪರಿಗಣಿಸುವ ಜಗತ್ತಿಗೆ ಆ ನೆಲದಿಂದಲೇ ನಾವು ಉತ್ತರ ಕೊಡುತ್ತೇವೆ’ ಎಂದು ಸ್ಮಾಟ್‌ರಿಜ್ ಅವರು ಪತ್ರಕರ್ತರಿಗೆ ಉತ್ತರಿಸಿದರು.
‘ಇ–1’ ಭೂಪ್ರದೇಶವು ಉತ್ತರ ವೆಸ್ಟ್‌ಬ್ಯಾಂಕ್‌ನಲ್ಲಿರುವ ಪ್ಯಾಲೆಸ್ಟೀನ್‌ನ ರಾಜಧಾನಿ ರಮಲ್ಲಾ ಪಟ್ಟಣದೊಂದಿಗೆ ಕೊನೆಯ ಭೌಗೋಳಿಕೆ ಕೊಂಡಿಯಾಗಿದೆ. ಇದರ ದಕ್ಷಿಣ ಭಾಗದಲ್ಲಿ ಬೆತ್ಲಹೆಮ್ ಪಟ್ಟಣವಿದೆ.
ಗಾಜಾದ ಮೇಲೆ ಮುಂದಿನ ಹಂತದ ಕಾರ್ಯಾಚರಣೆಗೆ ಒಪ್ಪಿಗೆ
ಜೆರುಸಲೇಂ(ಎಪಿ): ಗಾಜಾ ಪಟ್ಟಣದಲ್ಲಿ ಮುಂದಿನ ಹಂತದ ಸೇನಾ ಕಾರ್ಯಾಚರಣೆ ನಡೆಸಲು ಇಸ್ರೇಲ್ ಸಿದ್ಧತೆ ನಡೆಸಿದೆ. ಕಳೆದ 22 ತಿಂಗಳಿನಿಂದ ಪ್ಯಾಲೆಸ್ಟೀನ್‌ನಲ್ಲಿ ಹಮಾಸ್ ಬಂಡುಕೋರರು ನಡೆಸುತ್ತಿರುವ ಹೋರಾಟವನ್ನು ಕೊನೆಗಾಣಿಸಲು ಸಂಧಾನಕಾರರು ಪ್ರಯತ್ನಿಸುತ್ತಿದ್ದರೂ ಕೂಡ ಇಸ್ರೇಲ್ ಈ ತೀರ್ಮಾನ ತೆಗೆದುಕೊಂಡಿದೆ. ಗಾಜಾದಲ್ಲೇ ಹೆಚ್ಚು ಜನಸಂದಣಿ ಹೊಂದಿರುವ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಯೋಜನೆಗೆ ರಕ್ಷಣಾ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಇಸ್ರೇಲ್ ಸೇನೆಯು ಬುಧವಾರ ತಿಳಿಸಿದೆ. ಈಗಾಗಲೇ ಇಲ್ಲಿ 20 ಸಾವಿರ ಮೀಸಲು ಯೋಧರು ಕೆಲಸ ಮಾಡುತ್ತಿದ್ದು ಹೆಚ್ಚುವರಿಯಾಗಿ 60 ಸಾವಿರ ಯೋಧರನ್ನು ಕರೆಸುವ ಯೋಜನೆಯನ್ನು ಹೊಂದಿದೆ. ಗಾಜಾದಲ್ಲಿ ಮಾನವೀಯ ನೆರವು ವಿಷಯ ಗಂಭೀರ ಸ್ವರೂಪಕ್ಕೆ ತಲುಪಿರುವ ಕುರಿತು ಮಾನವ ಹಕ್ಕು ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಇಸ್ರೇಲ್ ಸೇನೆಯು ಈ ನಿರ್ಧಾರ ತೆಗೆದುಕೊಂಡಿದೆ. ‘ಗಾಜಾ ನಗರದಲ್ಲಿ ಹಮಾಸ್ ಬಂಡುಕೋರರು ಇನ್ನೂ ಕೂಡ ಸಕ್ರಿಯವಾಗಿದ್ದು ಅವರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಲಾಗಿದೆ’ ಎಂದು ಗಾಜಾದ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.